

ಸಿಡ್ನಿ : ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ಗಿಲ್ ಅವರನ್ನು ಅಪಹರಿಸಿ, ಹಿಂಸೆ ಮಾಡಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಸಿಡ್ನಿ ನಗರದಲ್ಲಿ ಶ್ರೀಮಂತರೇ ಹೆಚ್ಚಿರುವ ಪ್ರದೇಶವಾದ ಲೋಯರ್ ನಾರ್ತ್ ಶೋರ್ನಲ್ಲಿ ವಾಸಿಸುವ 50 ವರ್ಷದ ಮ್ಯಾಕ್ಗಿಲ್ರನ್ನು ಕಳೆದ ತಿಂಗಳು ಅಪಹರಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.
ಏಪ್ರಿಲ್ 14 ರಂದು ಮೂರು ಜನರು ಮ್ಯಾಕ್ಗಿಲ್ರನ್ನು ದಾರಿಯಲ್ಲಿ ನಿಲ್ಲಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದರು. ಒಂದು ಗಂಟೆ ಕಾಲ ನಗರದ ಹೊರಗಣ ಪ್ರದೇಶವೊಂದಕ್ಕೆ ಗಾಡಿ ಓಡಿಸಿಕೊಂಡು ಹೋಗಿ ಅಲ್ಲಿ ಅವರನ್ನು ಥಳಿಸಿ, ಗನ್ನಿಂದ ಬೆದರಿಸಿ, ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. "ಒಂದೇ ಗಂಟೆ ಅವರನ್ನು ಬಂಧಿಸಿಟ್ಟಿದ್ದರು. ಆದರೆ ಅದರಿಂದ ಮ್ಯಾಕ್ಗಿಲ್ ಭಾರೀ ಗಾಬರಿಗೆ ಒಳಗಾಗಿದ್ದರು" ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆ್ಯಂಥೋನಿ ಹೋಲ್ಟನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಬ್ಬ ಅಪಹರಣಕಾರನ ಪರಿಚಯ ಮ್ಯಾಕ್ಗಿಲ್ಗೆ ಇದ್ದು, ಸುಳಿವುಗಳನ್ನು ಆಧರಿಸಿ ಸುದೀರ್ಘ ತನಿಖೆ ನಡೆಸಿದ ನಂತರ ಇಂದು ಬೆಳಗಿನ ಜಾವ 27, 29, 42 ಮತ್ತು 46 ವರ್ಷ ವಯೋಮಾನದ ನಾಲ್ಕು ಜನರನ್ನು ಈ ಅಪರಾಧದ ಸಂಬಂಧವಾಗಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ಅಪಹರಣಕಾರರು ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಆದಾಗ್ಯೂ ಅಪರಾಧವು ಆರ್ಥಿಕ ಕಾರಣದಿಂದಲೇ ನಡೆದಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಟೆಸ್ಟ್ ಬೌಲರ್ ಆದ ಸ್ಟುವರ್ಟ್ ಮ್ಯಾಕ್ಗಿಲ್, ಆಸ್ಟ್ರೇಲಿಯಾ ಪರವಾಗಿ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರತಿಭಾನ್ವಿತ ಆಟಗಾರರಾಗಿದ್ದ ಅವರು ಶೇನ್ ವಾರ್ನ್ ಸಮಕಾಲೀನರು. (ಏಜೆನ್ಸೀಸ್)