

ಮುಂಬೈ: ಕ್ರೀಡಾ ಲೋಕ ಅಂದರೆ ಅದು ಅಚ್ಚರಿಯ ತಾಣ ಎಂದರೆ ತಪ್ಪಾಗಲಾರದು. ಪ್ರತಿದಿನ ನಾವು ಕ್ರೀಡೆ ಕುರಿತಾದ ಸುದ್ದಿಗಳನ್ನು ಓದಬೇಕಾದರೆ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತೇವೆ. ಕ್ರೀಡೆಯಲ್ಲಿ ವಿಶೇಷವಾಗಿ ಕ್ರಿಕೆಟ್ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಪ್ರತಿದಿನ ಒಂದಿಲ್ಲೊಂದು ವಿಶಿಷ್ಟ ಸಾಧನೆಗಳು ನಡೆಯುತ್ತಿರುತ್ತವೆ. ಇದೀಗ ಅದೇ ರೀತಿಯ ಸಾಧನೆಯೊಂದು ಸ್ಥಳೀಯ ಟೂರ್ನಮೆಂಟ್ನಲ್ಲಿ ನಡೆದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟ್ನಲ್ಲಿ 10 ವಿಕೆಟ್ಗಳ ಸಾಧನೆ ಮಾಡಿರುವವರು ಯಾರು ಎಂದರೆ ಕೇಳಿ ಬರುವುದು ಇಂಗ್ಲೆಂಡ್ನ ಜಿಮ್ ಲೇಕರ್, ಭಾರತದ ಅನಿಲ್ ಕುಂಬ್ಳೆ ಹಾಗೂ ನ್ಯೂಜಿಲೆಂಡ್ನ ಏಜಾಜ್ ಪಟೇಲ್ ಹೆಸರು ಕೇಳಿ ಬರುತ್ತಿದೆ. ಇದೀಗ ಈ ಸಾಲಿಗೆ ಹೊಸದಾಗಿ ಮುಂಬೈ ಮೂಲದ ಯುವ ಕ್ರಿಕೆಟಿಗ ಸೇರ್ಪಡೆಯಾಗಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಈತ ಯಶಸ್ವಿಯಾಗಿದ್ದಾನೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಕಂಗ ಕ್ರಿಕೆಟ್ ಲೀಗ್ನಲ್ಲಿ ಶೋಯೆಬ್ ಖಾಬ್ ಎಂಬಾತ 10 ವಿಕೆಟ್ಗಳನ್ನು ಉರುಳಿಸಿದ್ದು, ಎಲ್ಲರ ಗಮನ ಸೆಳೆದಿದ್ದಾನೆ. ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಮತ್ತು ಜಾಲಿ ಕ್ರಿಕೆಟರ್ಸ್ ನಡುವಿನ ಪಂದ್ಯದಲ್ಲಿ ಶೋಯೆಬ್ ಈ ಸಾಧನೆ ಮಾಡಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಈ ಪಂದ್ಯದಲ್ಲಿ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಎಡಗೈ ಸ್ಪಿನ್ನರ್ ಶೋಯೆಬ್, ಜಾಲಿ ಕ್ರಿಕೆಟರ್ಸ್ ತಂಡದ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು ಮತ್ತು ಅವರನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. 17.4 ಓವರ್ಗಳನ್ನು ಬೌಲ್ ಮಾಡಿದ ಶೋಯೆಬ್ 10 ವಿಕೆಟ್ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಎದುರಾಳಿ ತಂಡವನ್ನು 67 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ತಂಡಕ್ಕೆ ನೆರವಾದರು.
ಈ ಪಂದ್ಯದಲ್ಲಿ ಶೋಯೆಬ್ 10 ವಿಕೆಟ್ ಉರುಳಿಸುತ್ತಿದ್ದಂತೆ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ತಂಡದ ಮಾಲೀಕ ರವಿ ಮಾಂಡ್ರೇಕರ್ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡುವ ಮೂಲಕ ಯುವ ಸ್ಪಿನ್ನರ್ಅನ್ನು ಶ್ಲಾಘಿಸಿದರು. ಯುವ ಸ್ಪಿನ್ನರ್ನ ಸಾಧನೆಯನ್ನು ಕೊಂಡಾಡಿರುವ ನೆಟ್ಟಿಗರು ಮುಂದೊಂದು ದಿನ ಈತ ಭಾರತದ ಪರ ಆಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.