Badlapur Encounter| ರಸ್ತೆ ದಾಟಲು ಹೆದರುವವ ಈ ರೀತಿ ಮಾಡಲು ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯ ಕುಟುಂಬಸ್ಥರ ಕಿಡಿ

badlapur encounter
Published on

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದು, ಆರಕ್ಷರ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅಕ್ಷಯ್​ ಶಿಂಧೆ ಕುಟುಂಬಸ್ಥರು ಮಗನ ಸಾವನ್ನು ಖಂಡಿಸಿದ್ದು, ಇದು ವ್ಯವಸ್ಥಿತ ಸಂಚು ಎಂದು ಕಿಡಿಕಾರಿದ್ದಾರೆ.

ಬದ್ಲಾಪುರದಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಅಕ್ಷಯ್​ ಶಿಂಧೆನನ್ನು ನಿನ್ನೆ (ಸೆಪ್ಟೆಂಬರ್​ 23) ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರ ಬಳಿ ಇದ್ದ ಬಂದೂಕನ್ನು ಕಸಿದು ಅವರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಅತ್ಯಾಚಾರ ಆರೋಪಿ ಗುಂಡೇಟಿಗೆ ಬಲಿಯಾದ ವಿಚಾರ ತಿಳಿದು ಬದ್ಲಾಪುರದ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರೋಪಿ ತಾಯಿ, ಪೊಲೀಸರು ಕಸ್ಟಡಿಯಲ್ಲಿ ಇರಬೇಕಾದರೆ ಅಕ್ಷಯ್​ನನ್ನು ಮನಬಂದಂತೆ ಥಳಿಸಿದ್ದು, ತಮ್ಮಿಷ್ಟದಂತೆ ಬರೆದು ಆತನಿಂದ ಸಹಿ ಹಾಕಿಸಿಕೊಂಡು ಪೂರ್ವನಿಯೋಜನೆಯಂತೆ ಕೊಲೆ ಮಾಡಿದ್ದಾರೆ. ನಮ್ಮ ಮಗ ಪಟಾಕಿ ಸಿಡಿಸಲು, ರಸ್ತೆ ದಾಟಲು ಹೆದರುತ್ತಾನೆ. ಅಂತಹ ವ್ಯಕ್ತಿ ಈ ರೀತಿಯ ಕೃತ್ಯ ಎಸಗಲು ಸಾಧ್ಯವಿಲ್ಲ. ಪೊಲೀಸರು ಆತನನ್ನು ಕೊಲೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅಕ್ಷಯ್​ ತಾಯಿ ಆಗ್ರಹಿಸಿದ್ದಾರೆ.

ಅತ್ಯಾಚಾರ ಆರೋಪಿಯ ಎನ್​ಕೌಂಟರ್​ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು, ಪೊಲೀಸರ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಥಾಣೆ ಪೊಲೀಸ್​ ಆಯುಕ್ತರಾದ ಅಶುತೋಷ್ ದುಂಬ್ರೆ ತನಿಖೆಗೆ ಆದೇಶಿಸಿದ್ದು, ಎಂಟು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net