

ಮುಂಬೈ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಇತ್ತೀಚೆಗೆ ಇತರ ಆಟಗಾರರಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಕರೊನಾ ವೈರಸ್ ಭೀತಿಯಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಅಜಿಂಕ್ಯ ರಹಾನೆ, ಹಳೇ ಫೋಟೋಗಳನ್ನು ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ. ಪತ್ನಿಯೊಂದಿಗೆ ತೆರಳಿದ್ದ ಟ್ರೆಕ್ಕಿಂಗ್ ಫೋಟೋವನ್ನು ಮಂಗಳವಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಹಳೇ ದಿನಗಳು ಮೆಲುಕು ಹಾಕುತ್ತಿದ್ದಾರೆ. ಗ್ರೇಟ್ ಕಂಪನಿ ಎಂದು ಬರೆದುಕೊಂಡಿರುವ ರಹಾನೆ ಪತ್ನಿ ರಾಧಿಕಾ ದೋಪ್ವಾಕರ್ಗೆ ಟ್ಯಾಗ್ ಮಾಡಿದ್ದಾರೆ.
2018ರ ಫೆಬ್ರವರಿಯಲ್ಲಿ ಕಡೇ ಬಾರಿಗೆ ಏಕದಿನ ಪಂದ್ಯವಾಡಿದ್ದಾರೆ. ಮಧ್ಯಮ ಹಾಗೂ ಆರಂಭಿಕನಾಗಿಯೂ ಆಡಲು ಸೈ ಎನಿಸಿಕೊಂಡಿರುವ ರಹಾನೆಗೆ ರಾಹುಲ್ ದ್ರಾವಿಡ್ ಮಾದರಿ. 32 ವರ್ಷದ ರಹಾನೆ ಇದುವರೆಗೂ ಆಡಿರುವ 65 ಟೆಸ್ಟ್ ಪಂದ್ಯಗಳಿಂದ 11 ಶತಕ ಸೇರಿದಂತೆ 4203 ರನ್ ಬಾರಿಸಿದ್ದರೆ, 90 ಏಕದಿನ ಪಂದ್ಯಗಳಿಂದ 3 ಶತಕ ಒಳಗೊಂಡಂತೆ 2962 ರನ್ ಹಾಗೂ 20 ಟಿ20 ಪಂದ್ಯಗಳಿಂದ 375 ರನ್ ಕಲೆಹಾಕಿದ್ದಾರೆ.