

ವಿಜಯವಾಣಿ ಸುದ್ದಿಜಾಲ ಕೋಟ
ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲೂ ಜಲಾವೃತವಾಗುತ್ತಿದೆ. ಈ ಬಾರಿ ಸುಮಾರು 20ಕ್ಕೂ ಹೆಚ್ಚು ಮನೆ ಜಲಾವೃತ್ತವಾಗಿದ್ದು, ನೂರು ಎಕರೆ ಕೃಷಿ ಪ್ರದೇಶ ನಾಶವಾಗಿದೆ. ನೆರೆ ಹಾವಳಿಯಿಂದ ಮುಕ್ತಿಗೊಳಿಸಿ ಕೃಷಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿ ಎಂದು ಕಾರ್ಕಡ ರೈತ ಮುಖಂಡ ರಮೇಶ್ ಮೆಂಡನ್ ಆಗ್ರಹಿಸಿದ್ದಾರೆ.
ಕಾರ್ಕಡದಲ್ಲಿ ನೆರೆ ಹಾವಳಿ ತುತ್ತಾದ ಕೃಷಿ ಭೂಮಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ಚಿತ್ರಪಾಡಿ ವ್ಯಾಪ್ತಿಯ 60 ಎಕರೆ ಕೃಷಿಭೂಮಿ ಇನ್ನೂ ನಾಟಿಗೆ ಯೋಗ್ಯವಾಗಿಲ್ಲ. ಈ ಭಾಗದ ಹಿರೇಹೊಳೆಯಲ್ಲಿ ಹೂಳು ತುಂಬಿದ್ದೇ ಸಮಸ್ಯೆಗೆ ಕಾರಣ. ಚಿತ್ರಪಾಡಿಯಿಂದ ಹೋಗುವ ಹೊಳೆ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿದೆ. ಕೋಟ ಸಾಬ್ರಕಟ್ಟೆ ರಸ್ತೆಯ ಬನ್ನಾಡಿಯಲ್ಲಿ ಕಿರುಸೇತುವೆ ನಿರ್ಮಾಣವಾಗುತ್ತಿದ್ದು, ಪೂರ್ಣಗೊಂಡ ಬಳಿಕ ಅದರಿಂದ ಬರುವ ನೀರಿನ ಮಟ್ಟ ಐದು ಪಟ್ಟು ಹೆಚ್ಚಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಚಿತ್ರಪಾಡಿ ಮತ್ತು ಕಾರ್ಕಡ ಕೃಷಿ ಭೂಮಿಗೆ ನುಗ್ಗಿದರೆ ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವ ಎಸ್. ನಾಯ್ಕಗೆ ಮನವಿ ಸಲ್ಲಿಸಲಾಯಿತು. ಚಿತ್ರಪಾಡಿ ಕಾರ್ಕಡ ಬಡಾಹೋಳಿ, ಉಮೇಶ್ ಹೆಬ್ಬಾರ್, ಕೇಶವ ನೈರಿ, ಪರಮೇಶ್ವರ್ ಭಟ್, ಅಚ್ಚುತ್ ಪೂಜಾರಿ, ಶಿವರಾಂ ಕಾರಂತ್, ಶ್ರೀನಿವಾಸ ಕಾರಂತ್, ಕೃಷ್ಣ ಬಡಾಹೋಳಿ, ಗಣೇಶ್ ಕೆ, ಸುಧೀಂದ್ರ ಐತಾಳ್, ರಾಜ, ಚಂದ್ರ ಕೆ, ಗೋಪಿ ಮರಕಾಲ, ಪದ್ದು, ಕಮಲ ವಿಜಯ ನೈರಿ , ಅರುಣ್ ಸತ್ಯ, ಮಂಜ ಇದ್ದರು.
ಚಿತ್ರಪಾಡಿಯಿಂದ ಕಾವಡಿ ಹೊಳೆಯವರೆಗೂ ಹೂಳು ಎತ್ತಿ ನೀರು ಹರಿಯಲು ಅವಕಾಶವಾಗುವ ಕ್ರಿಯಾ ಯೋಜನೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಕಾರ್ಕಡ ಕಾವಡಿ ರಸ್ತೆಯಿಂದ ಹಿರೇ ಹೊಳೆ ಸಂಪರ್ಕದ ಕಲ್ಸಂಕ ತೋಡು ದಾಖಲಾತಿಯಲ್ಲಿ 12 ಅಡಿ ಅಗಲವಿದ್ದು, ಇದೀಗ ಕೆಲವೆಡೆ ತೋಡು ಮುಚ್ಚಿ ಹೋಗಿ ನೀರು ಹರಿಯುತ್ತಿಲ್ಲ. ಇದರ ಗಡಿ ಗುರುತಿಸಿ ಅತಿಕ್ರಮಣ ತೆರವು ಮಾಡಿ ಕೊಡಬೇಕು.-ರಮೇಶ್ ಮೆಂಡನ್, ರೈತ ಮುಖಂಡ https://www.vijayavani.net/dead-body-of-kudmaru-youth-found-in-stream