

David Warner and Rajamouli : ಡೇವಿಡ್ ವಾರ್ನರ್ ಹೆಸರು ಕೇಳಿದರೆ ಸಾಕು ಭಾರತೀಯರಿಗೆ ತುಂಬಾ ಖುಷಿಯಾಗುತ್ತದೆ. ಏಕೆಂದರೆ, ಭಾರತೀಯರ ಮೇಲೆ ವಾರ್ನರ್‌ಗೆ ಇರುವ ಪ್ರೀತಿ ಏನೆಂದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ತೆಲುಗು ಮಂದಿಗೆ ವಾರ್ನರ್ ಅಂದ್ರೆ ತುಂಬಾ ಇಷ್ಟ. ಏಕೆಂದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನಿಗೆ ತೆಲುಗು ಸಿನಿಮಾಗಳ ಮೇಲೆ ಹುಚ್ಚು ಪ್ರೀತಿ ಇದೆ.
ಐಪಿಎಲ್‌ನಲ್ಲಿ ಹೈದರಾಬಾದ್ ತಂಡಕ್ಕಾಗಿ ಆಡಿದಾಗಿನಿಂದ ವಾರ್ನರ್‌ಗೆ ಸಿನಿಮಾ ಪ್ರೀತಿ ಪ್ರಾರಂಭವಾಯಿತು. ಕರೊನಾ ಲಾಕ್‌ಡೌನ್ ಸಮಯದಲ್ಲಿ ಟಾಲಿವುಡ್ನ ಆ ಸಮಯದ ಎಲ್ಲ ಹಿಟ್ ಹಾಡುಗಳಿಗೆ ವಾರ್ನರ್ ರೀಲ್ಸ್ ಮಾಡಿ, ವೈರಲ್ ಆದರು. ತಾವೊಬ್ಬರೇ ರೀಲ್ಸ್ ಮಾಡದೇ ತಮ್ಮ ಕುಟುಂಬದ ಜೊತೆಗೆ ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಕೇವಲ ಹಾಡುಗಳಿಗೆ ಮಾತ್ರವಲ್ಲದೇ, ಕೆಲವು ರೋಚಕ ದೃಶ್ಯಗಳನ್ನು ಮರುಸೃಷ್ಟಿಸಿ ವಾರ್ನರ್ ವೈರಲ್ ಆದರು.
ತಾಜಾ ಸಂಗತಿ ಏನೆಂದರೆ, ವಾರ್ನರ್ ಮತ್ತು ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಿರ್ದೇಶಕ ರಾಜಮೌಳಿ ನಡುವೆ ಆಸಕ್ತಿದಾಯಕ ಸಂಭಾಷಣೆ ನಡೆದಿದೆ. ವಾರ್ನರ್ ಅವರು ಹಿಂದೆ ತೆಗೆದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜಮೌಳಿ ಪ್ರತಿಕ್ರಿಯಿಸಿದ್ದು, ಹಾಯ್ ವಾರ್ನರ್, ಮಹಿಷ್ಮತಿ ರಾಜನಂತೆ ಆಗುವ ಸಮಯ ಬಂದಿದೆ. ನಾನು ನಿಮಗೆ ರಾಯಲ್ ಹೆಲ್ಮೆಟ್ ಕಳುಹಿಸುತ್ತೇನೆ ಎಂದಿದ್ದಾರೆ. ಇದಕ್ಕೆ ವಾರ್ನರ್ ಕೂಡ ಪ್ರತಿಕ್ರಿಯಿಸಿದ್ದು, ಹೌದು ದಯವಿಟ್ಟು ಸರ್ ಎಂದು ಉತ್ತರಿಸಿದ್ದಾರೆ.
ರಾಜಮೌಳಿ ಮತ್ತು ವಾರ್ನರ್ ಈ ಹಿಂದೆ ಒಂದು ಪ್ರಚಾರ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಅಂದಿನಿಂದ, ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಇದೀಗ ರಾಜಮೌಳಿ ಅವರು ವಾರ್ನರ್‌ಗೆ ಉಡುಗೊರೆ ನೀಡುವುದಾಗಿ ಭರವಸೆ ನೀಡಿರುವುದರಿಂದ, ಬಾಹುಬಲಿ ಚಿತ್ರವನ್ನು ಮರು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ವಾರ್ನರ್ ಜೊತೆ ದೊಡ್ಡ ಯೋಜನೆ ರೂಪಿಸುತ್ತಿರುವಂತೆ ತೋರುತ್ತಿದೆ.
ಅಂದಹಾಗೆ, ಈ ವರ್ಷದ ಅಕ್ಟೋಬರ್‌ನಲ್ಲಿ, ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನು ಒಟ್ಟುಗೂಡಿಸಿ ಒಂದೇ ಭಾಗವಾಗಿ ಮರು ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಚಿತ್ರತಂಡ ಎಡಿಟಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದೆ. ಭಾರೀ ಪ್ರಚಾರ ಮಾಡಿ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. (ಏಜೆನ್ಸೀಸ್)