

ಬೆಂಗಳೂರು: ಸೆರೆಮನೆಗೆ ಕರೊನಾ ಸೋಂಕು ಹಡುವಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳಿಗೆ ಲಸಿಕೆ ಅಭಿಯಾನವನ್ನು ರಾಜ್ಯ ಬಂದಿಖಾನೆ ಇಲಾಖೆ ಕೈಗೊಂಡಿದ್ದು, 50 ಸಾವಿಕ್ಕೂ ಹೆಚ್ಚು ಕೈದಿಗಳು ಲಸಿಕೆ ಪಡೆಯಲಿದ್ದಾರೆ.
ಈ ಕುರಿತು ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಬಂದೀಖಾನೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಜೈಲುಗಳಿಗೆ ಸಜಾ ಮತ್ತು ವಿಚಾರಣಾಧಿನ ಕೈದಿಗಳಿಗೆ ಕರೊನಾ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರ ಜೈಲು ಸೇರಿದಂತೆ ಎಲ್ಲ ಕಾರಾಗೃಹಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜೈಲುಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಕೈದಿಗಳು ಇದ್ದಾರೆ. ಮೊದಲ ಹಂತದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ 45 ವರ್ಷ ಮೇಲ್ಪಟ್ಟ 2,500 ಕೈದಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಈಗ 18 ವರ್ಷ ಮೇಲ್ಪಟ್ಟ ಸಜಾ ಬಂಧಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಸ್ಥಳಿಯ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸಹಕಾರದಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ಅಲೋಕ್ ಮೋಹನ್ ತಿಳಿಸಿದ್ದಾರೆ. ಲಸಿಕೆ ಲಭ್ಯತೆ ಮೇರೆಗೆ ಪ್ರತಿ ದಿನ ಇಂತಿಷ್ಟು ಕೈದಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲ 50 ಸಾವಿರ ಕೈದಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.