

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕರೊನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್ ಹೊರೆ ಕಡಿಮೆ ಆಗುವಂತೆಯೂ ಮಾಡಿದೆ.
ಸೋಂಕು ಹರಡದಂತೆ ನಿಯಂತ್ರಿಸಲು ಸೋಂಕಿತರ ಪತ್ತೆಯಲ್ಲೂ ಹೆಚ್ಚಳವಾಗುವುದು ಅನಿವಾರ್ಯ. ಸೋಂಕಿತರನ್ನು ಬೇಗ ಪತ್ತೆ ಮಾಡಿದಷ್ಟೂ ಸೋಂಕು ಹರಡುವ ತೀವ್ರತೆಯನ್ನು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ಟೆಸ್ ಬೆಲೆ ತಗ್ಗಿಸಿರುವುದು ಉತ್ತಮ ನಡೆ ಎನಿಸಿಕೊಂಡಿದೆ. ಕೋವಿಡ್-19 ಟೆಸ್ಟ್ಗಳಲ್ಲಿ ಒಂದಾದ ಆರ್ಟಿ-ಪಿಸಿಆರ್ ಟೆಸ್ಟ್ ಅತ್ಯಂತ ಸಮರ್ಪಕ ವಿಧಾನವಾಗಿದ್ದು, ಇದಕ್ಕೆ ಬಳಸುವ ರಿ-ಏಜೆಂಟ್ಗಳ ಬೆಲೆ ತಗ್ಗಿರುವುದರಿಂದ ಟೆಸ್ಟ್ ಶುಲ್ಕವೂ ತಗ್ಗಿದೆ.
ಜುಲೈನಲ್ಲಿ ಕೋವಿಡ್ ಪರೀಕ್ಷೆಗೆ ಸಂಗ್ರಹಿಸಲಾದ ಸ್ವ್ಯಾಬ್ ಮಾದರಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಲು 2 ಸಾವಿರ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 3 ಸಾವಿರ ರೂ. ನಿಗದಿ ಪಡಿಸಲಾಗಿತ್ತು. ಬಳಿಕ ಆಗಸ್ಟ್ನಲ್ಲಿ ಇದನ್ನು ಕ್ರಮವಾಗಿ 1,500 ಹಾಗೂ 2,500 ಎಂದು ನಿಗದಿಪಡಿಸಲಾಯಿತು. ಇದೀಗ ಈ ಶುಲ್ಕವನ್ನು ಇನ್ನಷ್ಟು ತಗ್ಗಿಸಲಾಗಿದ್ದು, ಗಂಟಲ ದ್ರವದ ಮಾದರಿಯನ್ನು ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 1200 ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 1600 ರೂ. ನಿಗದಿ ಪಡಿಸಲಾಗಿದೆ.