ನಂಗೆ ಕರೊನಾ ಸೋಂಕು ತಗುಲಿದೆ, ಬೆಡ್ ಕೊಡಿಸಿ ಅಂತ ಸಿಎಂ ಮನೆಗೆ ಹೋದ ಸೋಂಕಿತ!

CM Residence Krishna
Published on

ಬೆಂಗಳೂರು: ಕರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಕೂಗು ಇದೀಗ ಸಿಎಂ ಮನೆಗೆ ನೇರವಾಗಿ ತಟ್ಟಿದೆ. ಬನಶಂಕರಿಯ ಅಂಬೇಡ್ಕರ್​ನಗರದ ವ್ಯಕ್ತಿ ಗುರುವಾರ ಕುಟುಂಬ ಸಮೇತ ಸಿಎಂ ಮನೆ ಬಳಿ ಹೋಗಿ ಬೆಡ್ ವ್ಯವಸ್ಥೆ ಮಾಡಿಸಿ ಎಂದು ಗೋಗರೆದಿದ್ದಾರೆ.

ನನಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತುಂಬಾ ಬಳಲಿದ್ದೇನೆ, ನನಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ಅಲವತ್ತುಕೊಂಡರು. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಇಲ್ಲ. ಆಸ್ಪತ್ರೆಗಳಿಗೆ ಅಲೆದಾಡಿದರೂ ಉಪಯೋಗವಾಗಿಲ್ಲ. ಬೆಡ್ ಖಾಲಿ ಇಲ್ಲ ಎಂಬ ಉತ್ತರ ಬರುತ್ತಿದೆ. ಎಲ್ಲಿಗೆ ದಾಖಲಾಗಲಿ ಎಂದು ಸಿಎಂ ಗೃಹ ಕಚೇರಿ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಸೋಂಕಿತನನ್ನು ಪೊಲೀಸರು ಕೆ.ಸಿ. ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಬಂದ ರೋಗಿಗೆ ಚಿಕಿತ್ಸೆ ನೀಡಿ: ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ರೋಗಿ ಬಂದರೂ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ. ಗುರುವಾರ ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಯಾವುದೇ ರೋಗಿಯನ್ನು ವಾಪಸ್ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ಇನ್ನುಮುಂದೆ ಕೇಳಿಬರಬಾರದು ಎಂದು ತಾಕೀತು ಮಾಡಿದರು. ಸೋಂಕಿಗೆ ತಡೆ ಹಾಕಲು ಡ್ರೋನ್ ಮೂಲಕ ರಸ್ತೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಚೆನ್ನೈನಿಂದ 25 ಡ್ರೋನ್​ಗಳನ್ನು ತರಿಸಲಾಗಿದೆ. ದಕ್ಷಿಣ ವಲಯದಲ್ಲಿ ನಾಲ್ಕು ಡ್ರೋನ್​ಗಳ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. 50 ಮೀಟರ್ ಎತ್ತರಕ್ಕೆ ಹಾರಬಲ್ಲ ಡ್ರೋನ್​ಗಳು 16 ಲೀಟರ್ ರಾಸಾಯನಿಕ ಸಾಮರ್ಥ್ಯ ಹೊಂದಿವೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net