

ನವದೆಹಲಿ: ದೇಶದಲ್ಲಿ ಕರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ಎಲ್ಲರಲ್ಲೂ ಕಳವಳ ಮೂಡಿಸಿದೆ. ಇದೇ ಕಾರಣಕ್ಕೆ ವೈಯಕ್ತಿಕ ಆರೋಗ್ಯ ಸುರಕ್ಷೆಗಾಗಿ ಕೋವಿಡ್ ಸ್ಟ್ಯಾಂಡರ್ಡ್ ಹೆಲ್ತ್ ಪಾಲಿಸಿ ಅಥವಾ ಕರೊನಾ ಕವಚ್ ಪಾಲಿಸಿಯನ್ನು ಮಾರುಕಟ್ಟೆಗೆ ಪರಿಚಯಿಸಬೇಕು. ಜುಲೈ 10ರೊಳಗೆ ಅದು ಎಲ್ಲರ ಕೈಗೆ ಸೇರುವಂತೆ ಮಾಡಬೇಕು ಎಂದು ವಿಮಾ ಕಂಪನಿಗಳಿಗೆ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ಸೂಚಿಸಿದೆ.
ಈ ಸಂಬಂಧ ಮಾರ್ಗಸೂಚಿ ಬಿಡುಗಡೆಮಾಡಿರುವ ಐಆರ್ಡಿಎಐ, ಈ ಪಾಲಿಸಿಯ ಅವಧಿಯನ್ನು ಮೂರೂವರೆ ತಿಂಗಳು, ಆರೂವರೆ ತಿಂಗಳು, ಒಂಭತ್ತೂವರೆ ತಿಂಗಳ ಅಲ್ಪಾವಧಿಗೆ ಅನ್ವಯಿಸುವಂತೆ ರೂಪಿಸಬೇಕು. ವಿಮಾ ಮೊತ್ತವು 50,000 ರೂಪಾಯಿಯಿಂದ ಹಿಡಿದು 5 ಲಕ್ಷ ರೂಪಾಯಿ ತನಕ ಕವರ್ ಮಾಡುವಂತೆ ಇರಬೇಕು.
ವಿಮಾ ಪಾಲಿಸಿ ಉತ್ಪನ್ನಕ್ಕೆ ಆಯಾ ವಿಮಾ ಕಂಪನಿ ಹೆಸರಿನ ಜತೆಗೆ ಕರೊನಾ ಕವಚ್ ಪಾಲಿಸಿ ಎಂದು ನಾಮಕರಣ ಮಾಡಬೇಕು. ಸಿಂಗಲ್ ಪ್ರೀಮಿಯಂ ಮಾದರಿಯಲ್ಲಿರಬೇಕು. ಈ ವಿಮೆಯ ಪ್ರೀಮಿಯಂ ಅನ್ನು ದೇಶಾದ್ಯಂತ ಒಂದೇ ಇರುವಂತೆ ನೋಡಿಕೊಳ್ಳಬೇಕು. ಉಳಿದವುಗಳಂತೆ ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ರೂಪಿಸಬಾರದು. ಕೋವಿಡ್ ಜತೆಗೆ ಇತರ ಸಮಸ್ಯೆಗಳಿದ್ದರೂ ಅವುಗಳ ಚಿಕಿತ್ಸೆಯೂ ಕವರ್ ಆಗುವಂತೆ ಪ್ರೀಮಿಯಂ ಇರಬೇಕು. ಪಾಲಿಸಿದಾರರಿಗೆ ಹಾಸ್ಪಿಟಲೈಸೇಷನ್ ವೆಚ್ಚ, ಹೋಮ್ ಕೇರ್ ಚಿಕಿತ್ಸಾ ವೆಚ್ಚ, ಆಯುಷ್ ಚಿಕಿತ್ಸೆ, ಪ್ರೀ ಮತ್ತು ಪೋಸ್ಟ್ ಹಾಸ್ಪಟಲೈಸೇಷನ್ ಚಿಕಿತ್ಸಾ ವೆಚ್ಚವೂ ಸಿಗುವಂತಿರಬೇಕು. ಹೋಮ್ ಕೇರ್ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿ ಷರತ್ತುಗಳಿದ್ದು, ಗರಿಷ್ಠ 14 ದಿನಗಳ ಚಿಕಿತ್ಸೆಯ ವೆಚ್ಚವನ್ನು ಈ ಪಾಲಿಸಿಗೆ ಸೇರಿಸಬಹುದಾಗಿದೆ.
ಜನರಲ್ ಇನ್ಶೂರೆನ್ಸ್ ಕಂಪನಿಗಳು ಮತ್ತು ಆರೋಗ್ಯ ವಿಮಾ ಕಂಪನಿಗಳು ಇಂಥ ಪ್ರಾಡಕ್ಟ್ ರೂಪಿಸಿ ಜುಲೈ 10ರೊಳಗೆ ಮಾರುಕಟ್ಟೆಗೆ ಬಿಡಬೇಕು ಎಂದು ಐಆರ್ಡಿಎಐ ಸೂಚಿಸಿದೆ. (ಏಜೆನ್ಸೀಸ್)