ಒಂದೇ ತಿಂಗಳಲ್ಲಿ 1,100 ಅಂತ್ಯ ಸಂಸ್ಕಾರ ಮಾಡಿಸಿದ ಪೊಲೀಸ್​ ಅಧಿಕಾರಿ! ಇವರು ನಿಜವಾದ ಹೀರೋ..

police
Published on

ನವದೆಹಲಿ: ಕರೊನಾ ಈ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರದ್ದು, ವೈದ್ಯಕೀಯ ವಲಯದ ಸಿಬ್ಬಂದಿಯದು ಒಂದು ರೀತಿಯ ಸಮಸ್ಯೆಯಾದರೆ ಪೊಲೀಸ್​ ಇಲಾಖೆಗೆ ಮತ್ತೊಂದು ರೀತಿಯ ಸಮಸ್ಯೆ. ಸೋಂಕಿತರ ನಿರ್ವಹಣೆಯಿಂದ ಹಿಡಿದು ಲಾಕ್​ಡೌನ್​ನಲ್ಲಿ ಜನರ ನಿರ್ವಹಣೆಯವರೆಗೂ ಕೆಲಸವೇ ಕೆಲಸ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿರುವ ಪೊಲೀಸರಲ್ಲಿ ಒಬ್ಬರು ದೆಹಲಿಯ ಎಎಸ್​ಐ ರಾಕೇಶ್​.


ರಾಕೇಶ್​ (56) ಏಪ್ರಿಲ್​ 13ರಿಂದ ಕೋವಿಡ್​ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತಾಗಾರವೊಂದರ ಬಳಿ ಅವರನ್ನು ಕೆಲಸಕ್ಕೆ ನಿಯೋಜಿಸಲಾಗಿದ್ದು, ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಅವರು ನೆರವಾಗುತ್ತಿದ್ದಾರೆ. ಏಪ್ರಿಲ್​ 13ರಿಂದ ಇಲ್ಲಿಯವರೆಗೆ ಸುಮಾರು 1,100ಕ್ಕೂ ಹೆಚ್ಚು ಸೋಂಕಿತರ ಅಂತ್ಯಸಂಸ್ಕಾರವನ್ನು ಅವರು ನಡೆಸಿಕೊಟ್ಟಿದ್ದಾರೆ. 50ಕ್ಕೂ ಹೆಚ್ಚು ಸೋಂಕಿತರಿಗೆ ಸ್ವತಃ ತಾವೇ ಕೊಳ್ಳಿಯಿಟ್ಟಿದ್ದಾರೆ.


ಇದೇ ಸಮಯದಲ್ಲಿ ಅವರ ಮಗಳ ಮದುವೆಯನ್ನೂ ನಿಶ್ಚಯಿಸಲಾಗಿತ್ತು. ಆದರೆ ಕೆಲಸದ ಒತ್ತಡ ಮತ್ತು ಜನರ ಸಂಕಷ್ಟವನ್ನು ಅರಿತಿದ್ದ ರಾಕೇಶ್​ ಮದುವೆಯನ್ನು ಮುಂದೂಡಿದ್ದಾರೆ. ಈ ಸಂಕಷ್ಟ ತೀರಿದ ಮೇಲೆ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ.
ರಾಕೇಶ್​, ಆ್ಯಂಬುಲೆನ್ಸ್​ನಿಂದ ಸೋಂಕಿತರ ಶವ ತಂದು ಅಂತ್ಯ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್​ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ದೆಹಲಿ ಪೊಲೀಸ್​ ಕಮಿಷನರ್​ ಎಸ್​ಎನ್​ ಶ್ರೀವಾಸ್ತವ್​ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಕೇಶ್​ರನ್ನು ಪ್ರಶಂಶಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net