

ಬೆಂಗಳೂರು : ಕೋವಿಡ್ ಡ್ಯೂಟಿಯಲ್ಲಿ ನಿರತರಾಗಿದ್ದು, ಕರೊನಾ ಸೋಂಕು ಅಥವಾ ಇತರೆ ಸಮಸ್ಯೆಯಿಂದ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ಸವಲತ್ತು ಕಲ್ಪಿಸುವ ಸಂಬಂಧ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. ಮೃತ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದಕ್ಕೆ ಮತ್ತು ಇತರ ಸವಲತ್ತಿಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
ಕರೊನಾ ಕರ್ತವ್ಯನಿರತ ಶಿಕ್ಷಕರ ಸಾವಿನ ಕುರಿತು ಮೇ 17 ರಂದು 'ವಿಜಯವಾಣಿ' ಜಿಲ್ಲಾವಾರು ವಿವರ ನೀಡಿ ವರದಿ ಪ್ರಕಟಿಸಿತ್ತು. ತತ್ಪರಿಣಾಮವಾಗಿ, ಕೂಡಲೇ ಮಾಹಿತಿ ಸಲ್ಲಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮೃತರ ಕುಟುಂಬಕ್ಕೆ ಪರಿಹಾರ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವಾಗ ಸೋಂಕಿಗೆ ಒಳಗಾಗಿ ನಿಧನ ಹೊಂದಿರುವ ಅಧಿಕಾರಿ/ನೌಕರ/ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮಂಜೂರು ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರಗಳ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಕೋವಿಡ್ನಿಂದಾಗಿ ಅಥವಾ ಇತರ ಅನಾರೋಗ್ಯ ಸಮಸ್ಯೆಗಳಿಂದ ಮರಣ ಹೊಂದಿರುವವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸೂಕ್ತ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಮತ್ತು ಇತರ ಸವಲತ್ತುಗಳನ್ನು ಮಂಜೂರು ಮಾಡುವ ಕುರಿತು ತುರ್ತು ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಆದೇಶಿಸಿದ್ದಾರೆ.