ಪಾಕಿಸ್ತಾನಕ್ಕೇ ಕೊಟ್​ ಬಿಟ್ರಲ್ಲ ಉಗುಳಿದ ಪಿಪಿಇ ಕಿಟ್​​! ಪಾನ್​ ಕಲೆ ನೋಡಿ ಬೆಚ್ಚಿಬಿದ್ದ ವೈದ್ಯರು...

PPE kitweb
Published on

ಮುಝ್ಪರಾಬಾದ್​ (ಪಾಕಿಸ್ತಾನ): ಕರೊನಾ ಸೋಂಕಿನ ಭೀತಿ ಎಲ್ಲರಿಗಿಂತ ಹೆಚ್ಚಾಗಿ ಕಾಡುತ್ತಿರುವುದು ಆರೋಗ್ಯ ಸಿಬ್ಬಂದಿಯನ್ನು. ಸದಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಈ ಸಿಬ್ಬಂದಿಗೆ ಸರ್ಕಾರಗಳು ಎಷ್ಟೇ ರಕ್ಷಣಾ ಸಾಧನ ಕೊಟ್ಟರೂ ಅದು ಕಡಿಮೆಯೇ.

ಆದರೆ ದುರದೃಷ್ಟ ಎಂದರೆ ಕರೊನಾ ತವರು ಚೀನಾವೇ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಪಿಪಿಇ ಕಿಟ್​ (ವೈಯಕ್ತಿಕ ಸುರಕ್ಷಾ ಸಾಧನ) ಒದಗಿಸುತ್ತಿದೆ. ಮೊದಲೇ ಚೀನಾ ಮಾಲ್​, ಕೇಳಬೇಕೆ? ಬೇಡಿಕೆ ಹೆಚ್ಚಿದಂತೆ ನಕಲಿ ಮಾಲ್​ಗಳನ್ನು ಕಡಿಮೆ ದರದಲ್ಲಿ ನೀಡುವಲ್ಲಿ ಪ್ರಸಿದ್ಧಿ ಹೊಂದಿರುವ ಚೀನಾ, ಇದೀಗ ವೈದ್ಯರ ಜತೆ ಚೆಲ್ಲಾಟವಾಡುತ್ತಿದೆ. ಇನ್ನೊಂದೆಡೆ ಕೆಲವು ಸರ್ಕಾರಗಳು ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ರಕ್ಷಣಾ ಸಾಧನ ನೀಡದೇ ಅವರ ಪ್ರಾಣವನ್ನು ಪಣಕ್ಕಿಡುವುದೂ ನಡೆದಿದೆ.

ಇಂಥದ್ದೇ ಒಂದು ಘಟನೆ ಪಾಕಿಸ್ತಾನದ ಮುಝ್ಪರಾಬಾದ್​ನಲ್ಲಿ ನಡೆದಿದೆ. ಇದಾಗಲೇ ಸುರಕ್ಷಾ ಸಾಧನಗಳನ್ನು ವೈದ್ಯಕೀಯ ಸಿಬ್ಬಂದಿಗೆ ನೀಡದೆ ಅವರ ಪ್ರಾಣಕ್ಕೆ ಪಾಕಿಸ್ತಾನ ಸರ್ಕಾರ ಕುತ್ತು ತರುವ ಬಗ್ಗೆ ಬೇಕಾದಷ್ಟು ವರದಿಗಳಾಗಿವೆ. ರಕ್ಷಣಾ ಕವಚ ನೀಡಿ ಎಂದ ವೈದ್ಯರನ್ನೇ ಬಂಧಿಸಿರುವ ಘಟನೆಗಳೂ ನಡೆದಿವೆ. ಇದೀಗ, ಅವರಿಗೆ ನೀಡಿರುವ ಪಿಪಿಇ ಕಿಟ್​ನಲ್ಲಿ ಪಾನ್​ನಿಂದ ಉಗುಳಿರುವ ಕಲೆಗಳು ಕಾಣಿಸಿದ್ದು, ವೈದ್ಯರನ್ನು ಇನ್ನಿಲ್ಲದ ಭೀತಿಗೆ ನೂಕಿದೆ!

ಇಲ್ಲಿಯ ಶೇಖ್​ ಖಲೀಫಾ ಬಿನ್‌ ಝೈದ್‌ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗಿರುವ ವೈಯಕ್ತಿಕ ಸುರಕ್ಷಾ ಸಾಧನಗಳಲ್ಲಿ ಉಗುಳಿದ ಕೆಂಪು ಕಲೆಗಳನ್ನು ವೈದ್ಯರು ನೋಡಿದ್ದರು. ಮಾಸ್ಕ್​ಗಳಲ್ಲಿ ಕೂಡ ಕಲೆ ಕಂಡಿತ್ತು. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ಪಾನಿನ ಕಲೆ ಎಂದು ತಿಳಿದಿದೆ. ರಾವಲ್ಪಿಂಡಿ ಸೇನಾ ಆಸ್ಪತೆಯಿಂದ ಬಂದಿರುವ ಸುಮಾರು 3 ಲಕ್ಷ ಪಿಪಿಇ ಕಿಟ್‌ಗಳ ಪೈಕಿ ಹಲವು ಕಿಟ್​ಗಳಲ್ಲಿ ಈ ಕಲೆಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಆಸ್ಪತ್ರೆಯ ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.

“ಆಸ್ಪತ್ರೆಯ ಶಿಷ್ಟಾಚಾರದಂತೆ ಸೋಂಕು ಹರಡುವುದನ್ನು ತಪ್ಪಿಸಲು ನಾವು ಎಲ್ಲ ಕಿಟ್‌ಗಳನ್ನು ನಾಶಪಡಿಸಿದ್ದೇವೆ. ಈ ಹಿಂದೆ ಚೀನಾ ನಿರ್ಮಿತ ಪರೀಕ್ಷಾ ಯಂತ್ರಗಳು ನಕಲಿಯಾಗಿತ್ತು. ಇದೀಗ ಬಳಸಲ್ಪಟ್ಟ ಪಿಪಿಇ ಕಿಟ್‌ಗಳನ್ನು ಕಳುಹಿಸುತ್ತಿರುವುದು ನಾಚಿಕೆಗೇಡು’ ಎಂದು ಅಧಿಕಾರಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಹಿಂದೆ ಒಳ ಉಡುಪಿನ ಬಟ್ಟೆಯಿಂದ ತಯಾರಿಸಿದ ಮಾಸ್ಕ್​ಗಳನ್ನು ಚೀನಾ ಪಾಕಿಸ್ತಾನಕ್ಕೆ ಪೂರೈಸಿರುವ ಆರೋಪವೂ ಇದೆ. ಇದರ ಜತೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ವೈದ್ಯರು ತತ್ತರಿಸಿ ಹೋಗಿದ್ದಾರೆ.

ಇಂದಿನ ಅಂಕಿಅಂಶದ ಪ್ರಕಾರ ಪಾಕಿಸ್ತಾನದಲ್ಲಿ 48,091 ಮಂದಿಗೆ ಕರೊನಾ ಸೋಂಕು ತಗುಲಿದ್ದು, 1,017 ಮಂದಿ ಮೃತಪಟ್ಟಿದ್ದಾರೆ. 14,155 ಮಂದಿ ಚೇತರಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net