ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು?

Corona Virusl
Published on

ನವದೆಹಲಿ: ಕರೊನಾ ಶಂಕಿತ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿತ್ತೇ ಎಂಬ ಬಗ್ಗೆ ಪ್ರಯೋಗಾಲಯದ ಪರೀಕ್ಷಾ ವರದಿಗೆ ಕಾಯದೇ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ಕುರಿತಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಶವ ಸಂಸ್ಕಾರವನ್ನು ಮಾತ್ರ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆಸಲು ಸಂಬಂಧಿಕರಿಗೆ ಸೂಚಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಹೆಚ್ಎಸ್) ಡಾ.ರಾಜೀವ್ ಗರ್ಗ್ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕಾದರೂ ಮೃತಪಟ್ಟರೆ ಎಲ್ಲರಿಗೂ ಕರೊನಾ ಸೋಂಕಿನ ಪರೀಕ್ಷೆ ಮಾಡಿಸುವುದು ಸದ್ಯದ ಮಟ್ಟಿಗೆ ಕಡ್ಡಾಯವಾಗಿದೆ. ಮೃತಪಟ್ಟವರಿಗೆ ಸೋಂಕು ತಗುಲಿದ್ದೇ ಹೌದಾದರೆ ಅವರ ಸಂಪರ್ಕಕ್ಕೆ ಬಂದಿರುವವರೆಲ್ಲರಿಗೂ ಪರೀಕ್ಷೆ ಮಾಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ. ಆದರೆ ಮೃತಪಟ್ಟ ನಂತರ ಅವರಿಗೆ ಸೋಂಕು ತಗುಲಿದೆಯೋ ಇಲ್ಲವೋ ಎಂಬ ಬಗ್ಗೆ ಆಸ್ಪತ್ರೆಗಳು ಪರೀಕ್ಷಾ ವರದಿಯನ್ನು ದೃಢೀಕರಿಸಿದ ನಂತರವಷ್ಟೇ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಶವಸಂಸ್ಕಾರಕ್ಕೆ ಅನುಮತಿ ನೀಡಲಾಗುತ್ತಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ 'ಡೆಡ್ ಬಾಡಿ ಮ್ಯಾನೇಜ್‌ಮೆಂಟ್‌ನ ಮಾರ್ಗದರ್ಶಿ ಸೂತ್ರಗಳ' ಪ್ರಕಾರ ಈ ದೇಹಗಳ ಶವಸಂಸ್ಕಾರಕ್ಕೆ ಕೆಲವೊಂದು ಮಾರ್ಗಸೂಚಿ ರೂಪಿಸಲಾಗಿದ್ದು, ಅದರಂತೆಯೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net