

ಕೋಲ್ಕತ್ತ: ಕರೊನಾ ಎಂಬ ಪದ ಮಾನವೀಯತೆಯನ್ನೇ ಮರೆಸುತ್ತಿರುವ ಅನೇಕ ನಿದರ್ಶನಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಿವೆ.
ಬಳ್ಳಾರಿ, ಯಾದಗಿರಿ ದಾವಣಗೆರೆ, ರಾಯಚೂರುಗಳಲ್ಲಿ ಕರೊನಾಪೀಡಿತರ ಶವವನ್ನು ಪ್ರಾಣಿಗಳ ಶವಕ್ಕಿಂತ ಕಡೆಯಾಗಿ ಸಂಸ್ಕಾರ ಮಾಡಿದ್ದನ್ನು ನೋಡಿದ್ದೇವೆ. ಇದೀಗ ಕೋಲ್ಕತ್ತದಲ್ಲೂ ಕುಟುಂಬವೊಂದು ಇಂಥದ್ದೇ ಸಂಕಷ್ಟ ಎದುರಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ವೃದ್ಧರೊಬ್ಬರಿಗೆ ಕೆಮ್ಮು ಹಾಗೂ ಉಸಿರಾಟದ ತೊಂದರೆಯಿತ್ತು. ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಕರೊನಾ ಪರೀಕ್ಷೆ ಮಾಡಿಸುವುದು ಅನಿವಾರ್ಯವಾಗಿತ್ತು. ಅದನ್ನು ಮಾಡಿಸಲಾಯಿತು. ಆದರೆ, ವರದಿ ಬರುವ ಮುನ್ನವೇ ಅವರು ಮೃತಪಟ್ಟರು.
ತಂದೆಯ ಅಂತ್ಯಕ್ರಿಯೆಗೆ ಮಕ್ಕಳು ಮುಂದಾದರು. ಚಿತಾಗಾರಗಳಲ್ಲಿ ಸಹಜವಾಗಿಯೇ ಡೆತ್ ಸರ್ಟಿಫಿಕೆಟ್ ಕೇಳುತ್ತಾರೆ. ಯಾವ ವೈದ್ಯರು ಡೆತ್ ಸರ್ಟಿಫಿಕೆಟ್ ನೀಡಲಿಲ್ಲ. ಕರೊನಾ ವರದಿ ಬರುವವರೆಗೆ ಕಾಯುವುದು ಅನಿವಾರ್ಯವಾಯಿತು.
ಆದರೆ ಶವವನ್ನು ಇಡುವುದು ಎಲ್ಲಿ..? ಯಾವ ಆಸ್ಪತ್ರೆಯ ಶವಾಗಾರಗಳು ಶವವನ್ನು ಇಟ್ಟುಕೊಳ್ಳಲು ನಿರಾಕರಿಸಿದವು. ಕರೊನಾ ವರದಿ ಬರುತ್ತಿಲ್ಲ. ವೈದ್ಯರು ಡೆತ್ ಸರ್ಟಿಫಿಕೇಟ್ ನೀಡುತ್ತಿಲ್ಲ. ಶವವನ್ನು ಇಟ್ಟುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಏನಪ್ಪಾ ಮಾಡೋದು ಎಂದು ಕೊನೆಗೆ ಮನೆಯವರು ಶವವನ್ನಿಡಲು ಐಸ್ಕ್ರೀಮ್ ಫ್ರೀಜರ್ ಖರೀದಿಸ ಬೇಕಾಯಿತು.
ಇದಾಗಿ ಎರಡು ದಿನಗಳ ಬಳಿಕ ಬಂದ ವರದಿಯಲ್ಲಿ ಕೋವಿಡ್ ಖಚಿತವಾಗಿತ್ತು. ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಬಂದು ಶವವನ್ನು ಕೊಂಡೊಯ್ದರು. ಕೋವಿಡ್ ಸಾವು ಅಥವಾ ತುರ್ತು ಸಂದರ್ಭಗಳಲ್ಲಿ ಜನರೇನು ಮಾಡಬೇಕು ಅವರಿಗೆ ದೊರೆಯುವ ಸಹಾಯಗಳೇನು ಎಂಬ ಬಗ್ಗೆ ಸಮನ್ವಯದ ಕೊರತೆ ಇರುವುದು ಇದರಿಂದ ಗೊತ್ತಾಗುತ್ತಿದೆ.