ಆ.15ಕ್ಕೆ ಬಿಡುಗಡೆ ಸಜ್ಜಾಗುತ್ತಿರುವ ಕೊವ್ಯಾಕ್ಸಿನ್​ ಬಗ್ಗೆ ಭಾರತ್​ ಬಯೋಟೆಕ್​ ಸಿಎಂಡಿ ಏನು ಹೇಳುತ್ತಾರೆ ನೋಡಿ...

covaxin
Published on

ಹೈದರಾಬಾದ್​: ಇದೀಗ ಮಾನವರ ಮೇಲಿನ ಪ್ರಯೋಗಕ್ಕೆ ಒಳಗಾಗಿ, ಆಗಸ್ಟ್​ 15ಕ್ಕೆ ಕರೊನಾ ವೈರಾಣುವಿನಿಂದ ಸ್ವಾತಂತ್ರ್ಯ ಕೊಡಿಸಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ದೇಶದ ಮೊದಲ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಕೊವ್ಯಾಕ್ಸಿನ್​ ಯಶಸ್ವಿಯಾಗುವುದು ನಿಶ್ಚಿತ ಎಂದು ಹೈದರಾಬಾದ್ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ನ (ಬಿಬಿಐಎಲ್​) ಚೇರ್ಮನ್​ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ದೇಶಿಯವಾಗಿ ಉತ್ಪಾದಿಸಲ್ಪಟ್ಟಿರುವ ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದು ಇದಾಗಿದೆ. ಈ ಚುಚ್ಚುಮದ್ದನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕರೊನಾ ಸೋಂಕಿತರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವುದಾಗಿ ಹೇಳಿದ್ದಾರೆ.

ಕೊವ್ಯಾಕ್ಸಿನ್​ ಅನ್ನು ವೆರೋ ಸೆಲ್​ ಪ್ಲಾಟ್​ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದುಗಳು ಬಹಳಷ್ಟು ಸೋಂಕುಗಳಿಗೆ ಪರಿಣಾಮಕಾರಿ ಎನಿಸಿವೆ. ಅವುಗಳ ಸಾಲಿಗೆ ಕೊವ್ಯಾಕ್ಸಿನ್​ ಕೂಡ ಸೇರುತ್ತದೆ ಎಂದು ಹೇಳಿದ್ದಾರೆ.

ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಅವರು ಕರೊನಾ ವೈರಾಣುವಿನ ಸ್ಟ್ರೈನ್​ ಅನ್ನು ಪ್ರತ್ಯೇಕಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್​) ಕೊಟ್ಟರು. ಅದನ್ನು ಪಡೆದುಕೊಂಡ ಬಿಬಿಐಎಲ್​ ರೋಗನಿರೋಧಕ ಚುಚ್ಚುಮದ್ದಿನ ಕ್ಯಾಂಡಿಡೇಟ್​ ಅನ್ನು ಸಿದ್ಧಪಡಿಸಿತು. ಭಾರತ್​ ಬಯೋಟೆಕ್​ ಈ ಹಿಂದೆ ರೇಬಿಸ್​, ಪೋಲಿಯೋ, ರೊಟಾವೈರಸ್​, ಜಾಪನೀಸ್​ ಎನ್​ಸಿಫಲೈಟಿಸ್​, ಚಕೂನ್​ಗುನ್ಯಾ ಮತ್ತು ಝೈಕಾ ಸೋಂಕು ನಿವಾರಣೆಗಾಗಿ ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕಗಳನ್ನು ಅಭಿವೃದ್ಧಿಪಡಿಸಿದ ಅನುಭವ ಹೊಂದಿದೆ. ಇದೀಗ ಆ ಸಂಸ್ಥೆ ಕೋವಿಡ್​-19 ಸೋಂಕಿಗೂ ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚಚ್ಚುಮದ್ದನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.

ಈ ಚುಚ್ಚುಮದ್ದನ್ನು ಸೋಂಕಿತರಿಗೆ ಕೊಟ್ಟಾಗ, ಅದರಲ್ಲಿರುವ ವೈರಾಣುವಿನ ಸ್ಟ್ರೈನ್​ಗೆ ಸೋಂಕು ಉಂಟು ಮಾಡಲಾಗಲಿ ಅಥವಾ ವಂಶಾಭಿವೃದ್ಧಿಗಾಗಲಿ ಅವಕಾಶ ಇರುವುದಿಲ್ಲ. ಹಾಗಾಗಿ ಮೃತ ವೈರಾಣುವಾಗಿ ಇದು ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತಾ, ಕರೊನಾ ವೈರಾಣು ವಿರುದ್ಧ ರೋಗನಿರೋಧಕಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net