

ನವದೆಹಲಿ: 32 ವರ್ಷಗಳ ಹಿಂದಿನ ಮನಿ ಆರ್ಡರ್ ವಂಚನೆ ಪ್ರಕರಣದಲ್ಲಿ ನಿವೃತ ಸಬ್-ಪೋಸ್ಟ್ ಮಾಸ್ಟರ್ಗೆ ಇದೀಗ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿದೆ.
ಹೌದು, ಹಾಪುರದ ಪಿಲ್ಖುವಾ ನಿವಾಸಿ ಮಹೇಂದ್ರ ಕುಮಾರ್ ಅವರಿಗೆ ನೋಯ್ಡಾದ ಗೌತಮ್ ಬುದ್ಧ ನಗರದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮಾಯಾಂಕ್ ತ್ರಿಪಾಠಿ ಅವರಿದ್ದ ಪೀಠ ಶಿಕ್ಷೆ ವಿಧಿಸಿದೆ. ಅಕ್ಟೋಬರ್ 12, 1993 ರಂದು ಪ್ರಾರಂಭವಾದ ಪ್ರಕರಣವೊಂದರಲ್ಲಿ ಈ ತೀರ್ಪು ಬಂದಿದೆ.
ಇಲ್ಲಿನ ನೋಯ್ಡಾ ಸೆಕ್ಟರ್ 15 ಪ್ರದೇಶದ ನಿವಾಸಿ ಅರುಣ್ ಮಿಸ್ತ್ರಿ ಎಂಬುವರು ಬಿಹಾರದಲ್ಲಿರುವ ತಮ್ಮ ತಂದೆ ಮದನ್ ಮಹಾತೋಗೆ 1,500 ರೂ.ಗಳನ್ನು ಪೋಸ್ಟ್ ಮುಖಾಂತರ ಮನಿ ಆರ್ಡರ್ ಮಾಡಿದ್ದರು. ಈ ವೇಳೆ ಮಹೇಂದ್ರ ಕುಮಾರ್ ಸೆಕ್ಟರ್ 15 ಪ್ರದೇಶದ ಅಂಚೆ ಕಚೇರಿಯ ಸಬ್-ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. 1,500 ರೂ ಜೊತೆಗೆ 75 ಕಮಿಷನ್ ಕೂಡ ಮಿಸ್ತ್ರಿ ಪಾವತಿಸಿದ್ದರು. ಆದಾಗ್ಯೂ, ಮನಿ ಆರ್ಡರ್ ದುಡ್ಡು ಅವರ ತಂದೆಗೆ ಹೋಗಿರಲಿಲ್ಲ.
ಮಿಸ್ತ್ರಿ ಹಣ ಪಡೆಯದಿದ್ದಾಗ, 1994 ಜನವರಿ 3 ರಂದು ಅಂಚೆ ಕಚೇರಿಯ ಅಧೀಕ್ಷಕ ಸುರೇಶ್ ಚಂದ್ರ ಅವರಿಗೆ ದೂರು ನೀಡಿದರು. ಈ ಸಮಯದಲ್ಲಿಯೇ ಅಂಚೆ ಕಚೇರಿಯಿಂದ ಬಂದ ರಶೀದಿ ನಕಲಿ ಎಂದು ಮಿಸ್ತ್ರಿ ಕಂಡುಹಿಡಿದರು. ಇಲಾಖಾ ತನಿಖೆಯಲ್ಲಿ 1,575 ಅನ್ನು ಎಂದಿಗೂ ಸರ್ಕಾರಿ ಖಾತೆಗೆ ಜಮಾ ಮಾಡಿಲ್ಲ ಎಂದು ಕಂಡುಬಂದಿದೆ. ನಂತರ, ಅಂಚೆ ಅಧೀಕ್ಷಕ ಸುರೇಶ್ ಚಂದ್ರ ಆರೋಪಿ ಮಹೇಂದ್ರ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಆದಾಗ್ಯೂ, ತನ್ನ ತಪ್ಪೊಪ್ಪಿಕೊಂಡ ಮಹೇಂದ್ರ ಕುಮಾರ್ ಹಣವನ್ನು ವಾಪಸ್ ಮಾಡಿದರು.
ದುರುಪಯೋಗಪಡಿಸಿಕೊಂಡ ಹಣವನ್ನು ಹಿಂದಿರುಗಿಸುವುದರಿಂದ ಅಪರಾಧ ಮುಕ್ತವಾಗುವುದಿಲ್ಲ ಎಂದು ನೋಯ್ಡಾ ನ್ಯಾಯಾಲಯವು ಹೇಳಿದೆ. ಸರ್ಕಾರಿ ಉದ್ಯೋಗಿ ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ನ್ಯಾಯಾಲಯ ಹೇಳುವ ಮೂಲಕ ಶಿಕ್ಷೆಯ ಆದೇಶ ಹೊರಡಿಸಿದೆ.(ಏಜೆನ್ಸೀಸ್)