

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(Actress Shilpa Shetty) ಅವರ ವಿರುದ್ಧ 2017ರಲ್ಲಿ ಹೂಡಲಾಗಿದ್ದ ಕೇಸ್ (ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ) ಅನ್ನು ಇದೀಗ ರಾಜಸ್ಥಾನ ಹೈಕೋರ್ಟ್ ವಜಾಗೊಳಿಸಿದೆ.
ನಟಿ ಶಿಲ್ಪಾ ಶೆಟ್ಟಿ ಅವರು ಖಾಸಗಿ ಸಂದರ್ಶನವೊಂದರಲ್ಲಿ 'ಭಂಗಿ' ಎಂಬ ಪದ ಬಳಸಿದ್ದರು. ಈ ಪದ ಬಳಕೆ ಮಾಡಿದ್ದರಿಂದ ವಾಲ್ಮೀಕಿ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ಅಶೋಕ್ ಪನ್ವಾರ್ ಎಂಬುವವರು ಎಸ್/ಎಸ್ಟಿ (SC/ST) ದೌರ್ಜನ್ಯ ತಡೆ ಕಾಯ್ದೆ ಅಡಿ 2017ರಲ್ಲಿ ಪ್ರಕರಣ ದಾಖಲಿಸಿದ್ದರು.
ಶಿಲ್ಪಾ ಶೆಟ್ಟಿ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಪಾಟೀಲ್, "ಶಿಲ್ಪಾ 2013ರ ಸಂದರ್ಶನವೊಂದರಲ್ಲಿ 'ಭಂಗಿ' ಎಂಬ ಪದ ಬಳಸಿದ್ದಾರೆ. ಆದರೆ, ದೂರುದಾರರು ಮೂರು ವರ್ಷಗಳ ಬಳಿಕ ಸಂದರ್ಶನ ವೀಕ್ಷಿಸಿ 2017ರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಹೇಳಿಕೆ ಬಗ್ಗೆ ನಮ್ಮ ಅರ್ಜಿದಾರರು ಈಗಾಲೇ ಕ್ಷಮೆಯಾಚಿಸಿದ್ದಾರೆ. ಈ ಪದವನ್ನು ಉದ್ದೇಶ ಪೂರಕವಾಗಿ ಬಳಸಿಲ್ಲ. ಹೀಗಾಗಿ, ಕೇಸ್ ರದ್ದುಗೊಳಿಸಬೇಕು" ಎಂದು ಕೋರ್ಟ್ಗೆ ಮನವಿ ಮಾಡಿದರು.
ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅರುಣ್ ಮೊಂಗಾ ನೇತೃತ್ವದ ಪೀಠ, ಎಸ್ಸಿ/ಎಸ್ಟಿ ಕಾಯ್ದೆಯಡಿಯಲ್ಲಿ ದಾಖಲಾದ ಕೇಸ್ಗೆ ಸಂಬಂಧಿಸಿದಂತೆ ದೂರುದಾರರು ಪೂರಕ ದಾಖಲೆ ಒದಗಿಸಲು ವಿಫಲರಾಗಿದ್ದಾರೆ. ಹೀಗಾಗಿ, ಕೇಸ್ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿ, ಅರ್ಜಿ ವಜಾಗೊಳಿಸಿದ್ದಾರೆ,(ಏಜೆನ್ಸೀಸ್).