

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ (Darshan) ಮೈಸೂರಿನ ತಮ್ಮ ಫಾರ್ಮ್‌ಹೌಸ್‌ಗೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು,ವಿಚಾರಣೆ ನಡೆಸಿದ ಕೋರ್ಟ್ 15 ದಿನಗಳ ಕಾಲ ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದೆ.
ರೇಣುಕಸ್ವಾಮಿ ಹತ್ಯೆೆ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಪರ ವಕೀಲರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರದ 57ನೇ ಸಿಸಿಎಚ್ ನ್ಯಾಯಾಲಯ ಡಿ.20ರಿಂದ ಜ.5ರವರೆಗೆ ಮೈಸೂರಿನಲ್ಲಿ ಇರಲು ಅವಕಾಶ ನೀಡಿದೆ.
ಡಿ.13ರಂದು ಹೈಕೋರ್ಟ್ ದರ್ಶನ್ ಸೇರಿ ಏಳು ಮಂದಿಗೆ ಜಾಮೀನು ನೀಡಿತ್ತು. ನ್ಯಾಯಲಯದ ವ್ಯಾಪ್ತಿಬಿಟ್ಟು ತೆರಳಕೂಡದು ಎಂದು ಷರತ್ತು ವಿಧಿಸಿತ್ತು. ಈ ಹಿನ್ನೆೆಲೆಯಲ್ಲಿ 57ನೇ ಸಿಸಿಎಚ್ ನ್ಯಾಯಾಲಯಕ್ಕೆೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮೈಸೂರಿಗೆ ತೆರಳಲು ನಾಲ್ಕು ವಾರಗಳ ಕಾಲ ಅನುಮತಿ ಕೇಳಿದ್ದರು. ಅದಕ್ಕೆ ತಕರಾರಿದ್ದರೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಿಶೇಷ ಅಭಿಯೋಜಕರಿಗೆ ನ್ಯಾಯಾಲಯ ಸೂಚಿಸಿತ್ತು. ಆದರೆ,ಸರ್ಕಾರಿ ಅಭಿಯೋಜಕರು ಯಾವುದೇ ಆಕ್ಷೇಪಣೆ ಸಲ್ಲಿಸದ ಹಿನ್ನೆೆಲೆಯಲ್ಲಿ 15 ದಿನಗಳ ಕಾಲ ತೆರಳಲು ಅವಕಾಶ ನೀಡಿದೆ.
ಮೈಸೂರಿನಲ್ಲಿ ದರ್ಶನ್ ಮಾಲೀಕತ್ವದ ಫಾರ್ಮ್ ಹೌಸ್ ಹೊಂದಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದಿದ್ದಾಗ ಮೈಸೂರಿನಲ್ಲೇ ತೋಟದ ಮನೆಯಲ್ಲಿ ಹೆಚ್ಚು ವಾಸ್ತವ್ಯ ಹೂಡುತ್ತಿದ್ದರು. ಕೊಲೆ ಪ್ರಕರಣದ ನಂತರ ಫಾಮ್೯ ಹೌಸ್ ಕಡೆ ಹೋಗಿರಲಿಲ್ಲ.