

ಕೊಚ್ಚಿ: ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಆರೋಪಿಯಾಗಿ ಅಮಾನತಾಗಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇಡಿ)ದ ಕಸ್ಟಡಿಗೆ ಒಪ್ಪಿಸಲು ಕೋರ್ಟ್ ಗುರುವಾರ ಬೆಳಗ್ಗೆ ಆದೇಶ ನೀಡಿದೆ. ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್ಗೆ ಶಿವಶಂಕರ್ ಅವರನ್ನು ಹಾಜರುಪಡಿಸಿದ್ದ ವೇಳೆ ಈ ಆದೇಶ ನೀಡಲಾಗಿದೆ.
ಚಿನ್ನಕಳ್ಳ ಸಾಗಣೆ ಕೇಸ್ನಲ್ಲಿ ಶಿವಶಂಕರ್ ಐದನೇ ಆರೋಪಿಯಾಗಿದ್ದು, 14 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಜಾರಿ ನಿರ್ದೇಶನಲಾಯ ಕೋರ್ಟ್ಗೆ ಮನವಿ ಮಾಡಿತ್ತು. ಜಾರಿ ನಿರ್ದೇಶನಾಲಯ ಇದಕ್ಕೂ ಮುನ್ನ ತನ್ನ ಅರೆಸ್ಟ್ ಆರ್ಡರ್ನಲ್ಲಿ ಶಿವಶಂಕರ್ ಅವರು ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಉಲ್ಲಂಘಿಸಿ ಅಪರಾಧ ಎಸಗಿದ್ದಾಗಿ ಆರೋಪಿಸಿತ್ತು.
ಬುಧವಾರ ಕೊಚ್ಚಿಯಲ್ಲಿರುವ ತನ್ನ ಕಚೇರಿಗೆ ಶಿವಶಂಕರ್ ಅವರನ್ನು ಕರೆಯಿಸಿಕೊಂಡು ಆರು ಗಂಟೆ ಕಾಲ ವಿಚಾರಣೆ ನಡೆಸಿತ್ತು. ರಾತ್ರಿ ಅವರನ್ನು ಬಂಧಿಸಿದ್ದಾಗಿ ಪ್ರಕಟಿಸಿದ್ದ ಜಾರಿನಿರ್ದೇಶನಾಲಯ ಇಂದು ಬೆಳಗ್ಗೆ ಕೋರ್ಟ್ಗೆ ಹಾಜರುಪಡಿಸಿತ್ತು. (ಏಜೆನ್ಸೀಸ್)