

ಕಾನ್ಪುರ: ಅತ್ಯಾಚಾರ ಆರೋಪಿಯನ್ನು ನಕಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.
ಎರಡು ತಿಂಗಳ ಹಿಂದೆ ಅತ್ಯಾಚಾರ ಆರೋಪಿಯನ್ನು ಬಂಧಿಸಲಾಗಿದ್ದು, ಆತ ಜಾಮೀನಿನ ಮೇಲೆ ಹೊರಬಂದ ನಂತರ ದೂರುದಾರರ ಮನೆಗೆ ತೆರಳಿ ಬೆದರಿಕೆ ಹಾಕಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ನರೇಂದ್ರ ಸಚನ್ ಎಂಬಾತನ ವಕೀಲರು ವಿಶೇಷ ಪಾಕ್ಸೋ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಇದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೇ ಈ ನ್ಯಾಯಾಲಯದ ಆದೇಶವನ್ನು ಆನ್ಲೈನ್ ಇ-ಕೋರ್ಟ್ ಪೋರ್ಟಲ್ನಲ್ಲಿಯೂ ಅಪ್ಲೋಡ್ ಮಾಡಲಾಗಿತ್ತು.
ಇದಾದ ನಂತರವೂ ನರೇಂದ್ರ ಕೇವಲ ವಾರದೊಳಗೆ ಜೈಲಿನಿಂದ ಹೊರಬಂದು ಸಂತ್ರಸ್ತೆಯ ಕುಟುಂಬದ ಮನೆಗೆ ಹೋಗಿ ಕೇಸ್ ವಾಪಸ್ ತೆಗೆದುಕೊಳ್ಳಿ ಇಲ್ಲವಾದರೆ ಇಡೀ ಕುಟುಂಬವನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು, ಕೂಡಲೇ ಕುಟುಂಬಸ್ಥರು ತಮ್ಮ ವಕೀಲನಿಗೆ ನಡೆದ ವಿಷಯ ತಿಳಿಸಿದ್ದಾರೆ. ಸಂತ್ರಸ್ತೆ ಪರ ವಕೀಲ ನರೇಶ್ ಮಿಶ್ರಾಗೂ ಜಾಮೀನು ಅರ್ಜಿ ತಿರಸ್ಕೃತವಾಗಿರುವುದು ತಿಳಿದಿದ್ದು, ಆರೋಪಿಗಳು ಹೊರಬಂದಾಗ ಅವರೂ ಬೆಚ್ಚಿಬಿದ್ದರು.
ಇದನ್ನೂ ಓದಿ: ಪ್ರಿಯತಮೆ ಜತೆಗೆ ಲಾಡ್ಜ್ನಲ್ಲಿದ್ದ ಪ್ರೇಮಿ ಬೆಳಿಗ್ಗೆಯಾದರೂ ಏಳಲಿಲ್ಲ: ಹಾರಿಹೋಗಿತ್ತು ಪ್ರಾಣಪಕ್ಷಿ, ಕಾರಣ ನಿಗೂಢ..
ಆದರೆ ಸಂಬಂಧಪಟ್ಟ ನ್ಯಾಯಾಲಯದ ಆರೋಪಿ ಪರ ವಕೀಲ ಮತ್ತು ಕ್ಲರ್ಕ್ ಜಾಮೀನು ರದ್ದತಿ ಆದೇಶವನ್ನು ತಿರುಚಿ ನಕಲಿ ಕಾಗದವೊಂದನ್ನು ಸಿದ್ಧಪಡಿಸಿ ಆರೋಪಿ ನರೇಂದ್ರನ ಬಿಡುಗಡೆ ಪ್ರಮಾಣ ಪತ್ರವನ್ನು ಜೈಲಿಗೆ ಕಳುಹಿಸಿದ್ದರು. ಆ ಬಳಿಕ ಆತ ಹೊರಬಂದಿದ್ದ.
ಇದೀಗ ಸಂತ್ರಸ್ತೆಯ ಕುಟುಂಬದ ದೂರಿನ ಮೇರೆಗೆ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರ ಆರೋಪಿ ನರೇಂದ್ರ ಸಚನ್, ನ್ಯಾಯಾಲಯದ ಕ್ಲರ್ಕ್ ಅಶ್ವನಿ ಮತ್ತು ವಕೀಲರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಳನ್ನು ಸಿದ್ಧಪಡಿಸುವುದು ಸೇರಿದಂತೆ ಇತರ ಗಂಭೀರ ಸೆಕ್ಷನ್ಗಳಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದಷ್ಟು ಬೇಗ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.(ಏಜೆನ್ಸೀಸ್)