

ನೆಲಮಂಗಲ: ಹಲವಾರು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತ, ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಕಿಲಾಡಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ದಾಸನಪುರ ಹೋಬಳಿ ಲಕ್ಷ್ಮೀಪುರದ ಶ್ರೀಸಾಯಿ ಎನ್ಕ್ಲೇವ್ ಗಾರ್ಡನ್ ಸಿಟಿಯ ಕೆ.ಬಿ. ಮೋಹನ್ ಕುಮಾರ್ ಮತ್ತು ಎಚ್.ಎಲ್. ಮಮತಾ ದಂಪತಿ ಬಂಧಿತ ಆರೋಪಿಗಳು.
ಆರೋಪಿ ದಂಪತಿ ಬಳಿ ಚೀಟಿ ಹಾಕಿದ್ದ ಲಾವಣ್ಯ ಎಂಬುವವರು ನೀಡಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವ ಆರ್ಎಂಸಿ ಯಾರ್ಡ್ ಪೊಲೀಸರು, ವಂಚನೆ ಆರೋಪಕ್ಕೆ ಒಳಗಾಗಿರುವ ಗಂಡ-ಹೆಂಡತಿ ಇಬ್ಬರನ್ನೂ ಬಂಧಿಸಿದೆ. ದೂರುದಾರರು 2017ರಲ್ಲೇ 3 ಲಕ್ಷ ರೂ. ಹಾಗೂ 1.5 ಲಕ್ಷ ರೂ. ಹಾಗೆ ಆರೋಪಿಗಳ ಬಳಿ 2 ಚೀಟಿ ಕಟ್ಟಲಾರಂಭಿಸಿದ್ದರು. ಕೊನೆಯಲ್ಲಿ ಪಡೆಯುವಂತೆ ಹೇಳಿ, ಎಲ್ಲ ಕಂತು ಮುಗಿದರೂ ಹಣ ಕೊಡದೆ ಸತಾಯಿಸಿದ್ದರು. ಆಗ ಇತರರ ಬಳಿ ಕೇಳಿದಾಗಲೂ ಅವರಿಗೂ ಹಾಗೆ ಮಾಡಿದ್ದು ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವವರೇ ಹೆಚ್ಚಾಗಿ ಇವರ ಬಳಿ ಚೀಟಿ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಸ್ವಂತ ಮನೆ ಹೊಂದಿದ್ದು ಸುಮಾರು 18 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇವರು 30ಕ್ಕೂ ಹೆಚ್ಚು ಮಂದಿಗೆ ಒಟ್ಟು ಒಂದೂವರೆ ಕೋಟಿ ರೂಪಾಯಿ ಕೊಡಬೇಕಾಗಿದೆ. ಇವರ ಬಳಿ ಪರವಾನಗಿ ಇಲ್ಲದಿದ್ದರೂ ಅಕ್ರಮವಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದಾರೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳು ಈಗ ಬಂಧಿತರಾಗಿದ್ದು, ಚೀಟಿದಾರರು ತಮ್ಮ ಹಣದ ಬಗ್ಗೆ ಚಿಂತೆಯಲ್ಲಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ