

Massive explosion: ಕೇರಳದ ಕಣ್ಣೂರಿನ ಕೀಜಾರದಲ್ಲಿ ಬಾಡಿಗೆ ಪಡೆದಿದ್ದ ಮನೆಯೊಂದರಲ್ಲಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಭೀಕರ ಸ್ಫೋಟ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮನೆ ನೆಲಸಮವಾಗಿದೆ. ಕಂಟ್ರಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಶನಿವಾರ(ಆಗಸ್ಟ್ 30) ವರದಿಯಾಗಿದೆ.
ಮೃತನಾಗಿರುವ ವ್ಯಕ್ತಿ ವಲಸೆ ಕಾರ್ಮಿಕನಾಗಿದ್ದ ಎನ್ನಲಾಗಿದ್ದು, ಸ್ಫೋಟದ ರಭಸಕ್ಕೆ ದೇಹದ ಭಾಗಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಕಣ್ಣಾಪುರಂ ಪೊಲೀಸರು ಮತ್ತು ತಳಿಪರಂಬ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಕೀಳರ ಗೋವಿಂದನ್ ಎಂಬ ನಿವೃತ್ತ ಶಾಲಾ ಶಿಕ್ಷಕರಿಗೆ ಸೇರಿದ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು. ಪಯ್ಯನ್ನೂರಿನಲ್ಲಿ ಬಿಡಿಭಾಗಗಳ ಅಂಗಡಿಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಪೊಲೀಸರ ಪರಿಶೀಲನೆ ವೇಳೆ ಹಲವಾರು ಸ್ಫೋಟಗೊಳ್ಳದ ದೇಶೀಯ ನಿರ್ಮಿತ ಬಾಂಬ್‌ಗಳನ್ನು ಪತ್ತೆಹಚ್ಚಿದ್ದಾರೆ. ಇದು ಬಾಂಬ್ ತಯಾರಿಕೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.
ಮನೆಯನ್ನು ಬಾಡಿಗೆಗೆ ಪಡೆದಿದ್ದ ಅನುಪ್ ಮಲಿಕ್ ಎಂಬ ವ್ಯಕ್ತಿ ವಿರುದ್ಧ ಪೊಲೀಸರು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅನುಪ್ ಮಲಿಕ್ ಹಬ್ಬಗಳಿಗೆ ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ಪೂರೈಸುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. 2016 ರ ಕಣ್ಣೂರಿನ ಪೋಡಿಕುಂಡ್ನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಮೃತ ವ್ಯಕ್ತಿ ಈತನ ಬಳಿ ಕೆಲಸ ಮಾಡುತ್ತಿದ್ದ ಎಂದು ಎನ್ನಲಾಗಿದೆ. (ಏಜೆನ್ಸೀಸ್)