

ಬೆಂಗಳೂರು: ಕರೊನಾ ಸೋಂಕು ಹೊಂದಿದ್ದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಗುಣಮುಖವಾಗಿ ಶನಿವಾರ ಆಸ್ಪತ್ರೆಯಿಂದ ಮನೆಗೆ ತೆರಳಿದೆ.
ಮಗುವಿನ ತಾಯಿ ಹಾಗೂ ಅಜ್ಜಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಸೋಂಕು ದೃಢಪಟ್ಟಿರಲಿಲ್ಲ. ಹೀಗಾಗಿ ನಿಗಾದಲ್ಲಿದ್ದ ಅವರಿಬ್ಬರೂ ಮಗುವಿನೊಂದಿಗೆ ಬಿಡುಗಡೆಯಾಗಿದ್ದಾರೆ. ದಕ್ಷಿಣಕನ್ನಡದಲ್ಲಿ 12 ಪ್ರಕರಣ ದೃಢಪಟ್ಟಿದ್ದು, 6 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರ ಜತೆಗೆ ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ..
10 ತಿಂಗಳ ಹಸುಗೂಸಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಅದನ್ನು ವೈದ್ಯರು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಒಗ್ಗೂಡಿ ಮಗುವಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದಾರೆ.
ಮಗುವಿಗೆ ಸೋಂಕು ದೃಢಪಟ್ಟಾಗ ಗ್ರಾಮದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದಿದ್ದರು ಸಜಿಪನಡು ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಿ, ಜಿಲ್ಲಾ ಆಡಳಿತವೇ ಗ್ರಾಮಸ್ಥರಿಗೆ ಅಗತ್ಯ ಸಾಮಗ್ರಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದ್ದರು.