

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆಯಿಂದ ಸಿಎಂ ಜ್ವರದಿಂದ ಬಳಲುತ್ತಿದ್ದರು. ಜನರಲ್ ಚೆಕಪ್ಗಾಗಿ ಇಂದು ಬೆಳಗ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಿಎಂ ಹೋಗಿದ್ದರು. ಯಡಿಯೂರಪ್ಪ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಅಡ್ಮಿಟ್ ಆಗುವಂತೆ ಹೇಳಿದ್ದರು.
ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ಗೆ ಒಳಗಾದ ಸಿಎಂ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಯಡಿಯೂರಪ್ಪಗೆ 2ನೇ ಬಾರಿ ಕರೊನಾ ಸೋಂಕು ಪಾಸಿಟಿವ್ ಬಂದಿದೆ. ಕಳೆದ ವರ್ಷ ಸೋಂಕು ತಗುಲಿ ಗುಣಮುಖರಾಗಿದ್ದರು. ಮಾ.18ರಂದು ಸಿಎಂ ಕರೊನಾ ವ್ಯಾಕ್ಸಿನ್ ಪಡೆದಿದ್ದರು. ಆದರೂ ಕರೊನಾ ಸೋಂಕು ಮತ್ತೆ ತಗುಲಿದೆ.
ಸಿಎಂ ಯಡಿಯೂರುಪ್ಪ ಅವರು ಆಸ್ಪತ್ರೆಗೆ ಬರುವ ಮುನ್ನಾ ಅಂದರೆ ಇಂದು ಬೆಳಗ್ಗೆ ಆರೋಗ್ಯ ಸಚಿವರೊಂದಿಗೆ ಕರೊನಾ ಎಮರ್ಜೆನ್ಸಿ ಮೀಟಿಂಗ್ ಮಾಡಿದ್ದರು. ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಜಾರಿ ಕುರಿತು ಚರ್ಚಿಸಿದ್ದರು. ಸಿಎಂ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ನಿನ್ನೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆ ರೋಡ್ ಶೋ ಮತ್ತು ಬಹಿರಂಗ ಸಭೆಯಲ್ಲೂ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರವಾಗಿ ಮತಯಾಚಿಸಿದ್ದರು.
ಕರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ಸಿಎಂ ಅವರೇ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಜ್ವರದ ಹಿನ್ನೆಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗಲಕ್ಷಣ ಇರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.