

ಬೆಂಗಳೂರು: ಟಿಕ್ಕಿ ಪತ್ನಿಯೊಬ್ಬಳು ಗಂಡನನ್ನು ಬಿಟ್ಟು ಸ್ನೇಹಿತನೊಂದಿಗೆ ಸುತ್ತಾಡಲು ಕರೊನಾ ಹೆಸರಲ್ಲಿ ಹೈಡ್ರಾಮ ಮಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಸ್ನೇಹಿತನೊಂದಿಗೆ ಎಸ್ಕೇಪ್ ಆಗಲು ಆಕೆಯೇ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಕಂಡ ಪೊಲೀಸರೇ ಅರೆಕ್ಷಣ ಶಾಕ್ ಆಗಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ 28 ವರ್ಷದ ರುಚಿಕುಮಾರಿಯೇ ಈ ಮಾಸ್ಟರ್ ಪ್ಲ್ಯಾನ್ ರೂವಾರಿ. ಆಕೆಗೆ ವಿಕ್ಕಿ ಕುಮಾರ್ (30) ಜತೆ ಮದುವೆಯಾಗಿದ್ದು, ದಂಪತಿ ಬೊಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಇವರಿಬ್ಬರೂ ಸಾಫ್ಟ್ವೇರ್ ಕಂಪನಿ ಉದ್ಯೋಗಿಗಳಾಗಿದ್ದು, ಕರೊನಾ ಲಾಕ್‍ಡೌನ್ ಜಾರಿ ಆದಾಗಿನಿಂದ ವರ್ಕ್ ಫ್ರಂ ಹೋಮ್ ಇತ್ತು. ಇಬ್ಬರೂ ಮನೆಯಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿತ್ತು. ಪತ್ನಿಗೆ ಹೊರ ಹೋಗದಂತೆ ವಿಕ್ಕಿ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಜಗಳ ತಾರಕಕ್ಕೇರಿತ್ತು. ಇದರಿಂದ ಬೇಸತ್ತ ಪತ್ನಿ, ರಾಂಚಿಯಲ್ಲಿದ್ದ ತನ್ನ ಗೆಳೆಯ ಮೊಹಮ್ಮದ್ ಜತೆಗೆ ಮನೆಯಿಂದ ಹೊರಹೋಗಲು ಪ್ಲ್ಯಾನ್ ಮಾಡಿದ್ದಳು. ಅದರಂತೆ ಸ್ನೇಹಿತೆಯನ್ನು ಕರೆದೊಯ್ಯಲು ಕರೊನಾ ಟೆಸ್ಟ್ ಮಾಡುವ ಸೋಗಿನಲ್ಲಿ ಪಿಪಿಇ ಕಿಟ್ ಧರಿಸಿಕೊಂಡು ಬಿಬಿಎಂಪಿ ಸಿಬ್ಬಂದಿ ಹೆಸರಲ್ಲಿ ಸೆ.1ರಂದು ಗೆಳತಿ ಮನೆಗೆ ಬಂದ ಮೊಹಮ್ಮದ್, ಗಂಡ-ಹೆಂಡತಿಯ ಸ್ವಾಬ್ ಸಂಗ್ರಹಿಸಿ ಹೋಗಿದ್ದ.
ಸೆ.3ರಂದು ಬಿಬಿಎಂಪಿ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿದ ಮೊಹಮ್ಮದ್, ರುಚಿಕುಮಾರಿಗೆ ಕರೊನಾ ಪಾಸಿಟಿವ್ ಇದೆ. ವಿಕ್ಕಿಗೆ ನೆಗೆಟಿವ್ ಎಂದಿದ್ದ. ಅದರಂತೆ ರುಚಿಯನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಮನೆ ಬಾಗಿಲಿಗೆ ಆಂಬುಲೆನ್ಸ್ ತಂದಿಂದ. ಈ ಆಂಬುಲೆನ್ಸ್ ಅನ್ನು ಆತ ರಾಂಚಿಯಿಂದಲೇ ಬಾಡಿಗೆಗೆ ತಂದಿದ್ದನಂತೆ!
ಮೂರು ದಿನ ಆದ್ರೂ ಪತ್ನಿ ಫೋನ್ ಮಾಡಿರಲ್ಲ. ಆಕೆಯ ನಂಬರ್ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡ ವಿಕ್ಕಿ, ಪ್ರಶಾಂತ್ ಆಸ್ಪತ್ರೆ ಬಳಿ ವಿಚಾರಿಸಿದಾಗ ರುಚಿಕುಮಾರಿ ಅಡ್ಮಿಟ್ ಆಗಿಯೇ ಇಲ್ಲ ಅನ್ನೋದು ಗೊತ್ತಾಗುತ್ತೆ. ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಹೋದ ವಿಕ್ಕಿ ದೂರು ಕೊಟ್ಟಿದ್ದ. ನಡೆದ ಘಟನೆ ಬಗ್ಗೆ ಪೊಲೀಸರಿಗೆ ಸಂಪೂರ್ಣವಾಗಿ ವಿವರಿಸಿದ್ದ. ರುಚಿಕುಮಾರಿ ಮತ್ತು ಮೊಹಮ್ಮದ್ ಇಬ್ಬರ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ ತಿಳಿಯಿತು ಅವರಿಬ್ಬರೂ ದೆಹಲಿಯಲ್ಲಿ ಇದ್ದಾರೆಂದು!
ಕೊನೆಗೆ ತಪ್ಪೊಪ್ಪಿಕೊಂಡ ರುಚಿ, ಗಂಡ ಹೊರ ಹೋಗಲು ಬಿಡುತ್ತಿರಲಿಲ್ಲ. ಹಾಗಾಗಿ ನಾನೇ ಸ್ನೇಹಿತನ ಜೊತೆ ಹೋಗಿದ್ದೆ ಎಂದಿದ್ದಾಳೆ. ಪತಿ, ಪತ್ನಿ ಹಾಗೂ ಸ್ನೇಹಿತ ಮೊಹಮ್ಮದ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಮೂವರನ್ನೂ ಬಿಟ್ಟು ಕಳುಹಿಸಿದ್ದಾರೆ.