ಕರೊನಾ ಸೋಂಕಿತನ ಬಾಯಿಗೆ ಬಾಯಿ ಇಟ್ಟರು, ಕಿರುನಾಲಿಗೆಯನ್ನು ಬರಿಗೈಲಿ ತಿಕ್ಕಿದರು... ಬೆಚ್ಚಿಬೀಳಿಸುತ್ತೆ ಪ್ರೈಮರಿ ಕಾಂಟ್ಯಾಕ್ಟ್

coronaaa
Published on

ಮುಳಗುಂದ: ಇಂದು ಕರೊನಾ ಸೋಂಕಿಗೆ ಬಲಿಯಾದ ಗದಗ ತಾಲೂಕಿನ ಸೀತಾಲಹರಿ ಗ್ರಾಮದ ಕೆಎಸ್​ಆರ್​ಟಿಸಿ ಬಸ್ ಚಾಲಕ (52 ವರ್ಷ)ನ ಪ್ರೈಮರಿ ಕಾಂಟ್ಯಾಕ್ಟ್ ನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.

ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಈತ ಗುರುವಾರ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಈತನ ಗಂಟಲಿನಲ್ಲಿ ಕೈ ಹಾಕಿ ಹಲವರು ಕಿರುನಾಲಿಗೆ ತಿಕ್ಕಿದ್ದಾರೆ, ಮೈ-ಕೈ ಒತ್ತಿದ್ದಾರೆ. ಇಷ್ಟೇ ಅಲ್ಲ, ಉಸಿರಾಟದ ತೊಂದರೆ ಆಗಿದೆ ಎಂದು ಕೆಲವರು ಈತನ ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟಿದ್ದಾರೆ...

ಮೃತನು ಕೊಪ್ಪಳ ಡಿಪೋದಲ್ಲಿ ಚಾಲಕನಾಗಿದ್ದ. ಲಾಕ್​ಡೌನ್​ ವೇಳೆ ಊರಿಗೆ ಬಂದವ ವಾಪಸ್​ ಹೋಗಿರಲಿಲ್ಲ. ಕಳೆದ ಒಂದು ವಾರದಿಂದ ಈತನಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದರೂ ಗ್ರಾಮದ ಹಲವರು ಈತನೊಂದಿಗೆ ಚಕ್ಕಾ ಆಡಿದ್ದಾರೆ. ಟೈಂ ಪಾಸ್​ಗಾಗಿ ಇಸ್ಪೀಟ್​ ಆಡಿದ್ದಾರೆ. ಹುಷಾರಿಲ್ಲ, ಕಿರುನಾಲಿಗೆ ಬಿದ್ದಿದೆ ಎಂದು ಈತನ ಗಂಟಲಿಗೆ ಕೈ ಹಾಕಿ ನಾಲಿಗೆಯನ್ನು ತಿಕ್ಕಿದ್ದರು. ಆದರೆ ಗುರುವಾರ ಆತ ಅಸುನೀಗಿದ್ದ.

ಮೃತನಿಗೆ ಕರೊನಾ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಈತನೊಂದಿಗೆ ಸಂಪರ್ಕ ಹೊಂದಿದ 60 ಜನರನ್ನು ಪಟ್ಟಣದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ.

ಸೀತಾಲಹರಿ ಗ್ರಾಮದ ಜನಸಂಖ್ಯೆ ಸಾವಿರ ಸಮೀಪ ಇದೆ. ಮೃತನು ಸಾವಿಗೂ ಮುನ್ನ ಹಲವರ ಸಂಪರ್ಕ ಹೊಂದಿದ್ದರಿಂದ ಇಡೀ ಗ್ರಾಮದ ಜನರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net