ರಾಂಚಿ: ಕರೊನಾ ಸೋಂಕಿಗೆ ತುತ್ತಾದ ವ್ಯಕ್ತಿಯೊಬ್ಬ ರಾತ್ರಿಯೆಲ್ಲ ನರಳಾಡಿ, ಬೆಳಗ್ಗೆ ಎನ್ನುವಷ್ಟೊತ್ತರಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನ ಗರ್ವಾದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತ ಏಪ್ರಿಲ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದ. ವಿಪರೀತ ಅನಾರೋಗ್ಯದಿಂದ ಬಳಲುತ್ತಿದ್ದ ಆತ ಪ್ರತಿದಿನ ರಾತ್ರಿಯೂ ನರಳಾಡುತ್ತಿದ್ದು, ಬೇರೆ ರೋಗಿಗಳು ನಿದ್ರೆ ಮಾಡದಂತಾಗಿತ್ತಂತೆ. ಅದರಂತೆ ಸೋಮವಾರ ರಾತ್ರಿಯೂ ಆತ ನರಳಾಡಿದ್ದಾನೆ. ನೋವೆಂದು ಕೂಗಿಕೊಂಡಿದ್ದಾನೆ. ಅದಾದ ನಂತರ ವಾರ್ಡ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆತ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣವೇನು ಎನ್ನುವುದು ಗೊಂದಲಮಯವಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)