ಕರೊನಾದಿಂದಾಗಿ ತಬ್ಬಿಕೊಳ್ಳಲು ಆಗುತ್ತಿಲ್ಲವೆ? ಇಲ್ಲಿದೆ ನೋಡಿ ಉಪಾಯ...

tree
Published on

ಇಸ್ರೇಲ್‌: ಕರೊನಾ ವೈರಸ್‌ ಭೀತಿಯಿಂದಾಗಿ ಬೇರೆಯವರನ್ನು ಅಪ್ಪಿಕೊಳ್ಳುವುದು ದೂರದ ಮಾತು, ಷೇಕ್‌ ಹ್ಯಾಂಡ್‌ ಕೂಡ ಮಾಡದಂಥ ಪರಿಸ್ಥಿತಿ, ಅಷ್ಟೇ ಏಕೆ? ಹತ್ತಿರ ನಿಂತು ಮಾತನಾಡುವುದಕ್ಕೂ ಭಯ!

ಆದರೆ ಹಲವು ಮಂದಿಗೆ ತಮ್ಮ ಸ್ನೇಹದ ಪರಿಯನ್ನು ತಬ್ಬಿಕೊಂಡು ತೋರಿಸುವ ಹಂಬಲ. ಅಪರೂಪದ ಸ್ನೇಹಿತರು ಸಿಕ್ಕಾಗ ಇಲ್ಲವೇ ಆತ್ಮೀಯರು ಭೇಟಿಯಾದಾಗ ಅಪ್ಪಿಕೊಂಡು ವಿಷ್‌ ಮಾಡಿಕೊಳ್ಳುವುದು ಸಹಜ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವೇ ಸರಿ. ಏಕೆಂದರೆ ಯಾರನ್ನೂ ನಂಬದ ಸ್ಥಿತಿ ಇಂದಿನದ್ದು. ಯಾರಿಗೆ ಸೋಂಕು ತಗುಲಿರುತ್ತದೆಯೋ ಎಂಬ ಭಯ.

ಆದರೆ ಅಪ್ಪಕೊಂಡು ಪ್ರೀತಿಯನ್ನು ತೋರಿಸಲು ಸಾಧ್ಯವಾಗದ್ದಕ್ಕೆ ಬೇಸರಪಟ್ಟುಕೊಳ್ಳಬೇಡಿ, ಇಲ್ಲಿದೆ ನೋಡಿ ಉಪಾಯ ಎನ್ನುತ್ತಿದ್ದಾರೆ ಇಸ್ರೇಲ್‌ನ ಪರಿಸರ ಮತ್ತು ಉದ್ಯಾನ ಪ್ರಾಧಿಕಾರ. ನೀವು ಸ್ನೇಹಿತರನ್ನು ತಬ್ಬಿಕೊಳ್ಳುವ ಬದಲು ಮರವನ್ನು ಒಮ್ಮೆ ಅಪ್ಪಿ ನೋಡಿ, ಎಷ್ಟು ಸಂತೋಷ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬುದು ತಿಳಿಯುತ್ತದೆ ಎನ್ನುತ್ತಿದ್ದಾರೆ ಪ್ರಾಧಿಕಾರದ ಪರಿಸರಮಿತ್ರರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹರಿಬಿಡಲಾಗಿದೆ. "ಈ ಅಹಿತಕರ ಕರೊನಾ ಸಮಯದಲ್ಲಿ ಪ್ರಕೃತಿಯ ಸವಿಯನ್ನು ಸವಿಯಿರಿ, ಮರದ ಬಳಿ ಹೋಗಿ, ಆಳವಾದ ಉಸಿರನ್ನು ತೆಗೆದುಕೊಳ್ಳಲು, ಮರವನ್ನು ತಬ್ಬಿಕೊಳ್ಳಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಇದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುವುದು ನಿಮಗೇ ತಿಳಿಯುತ್ತದೆ’ ಎಂದಿದ್ದಾರೆ ಪ್ರಾಧಿಕಾರದ ಮಾರ್ಕೆಟಿಂಗ್ ನಿರ್ದೇಶಕ ಒರಿಟ್ ಸ್ಟೀನ್ಫೆಲ್ಡ್ ಅಪೊಲೊನಿಯಾ.

ಮನುಷ್ಯನ ಅತ್ಯಂತ ಮೂಲಭೂತ ಅಗತ್ಯವೆಂದರೆ ಸಂಪರ್ಕ ಹಾಗೂ ಸ್ಪರ್ಶ. ಅದಕ್ಕಾಗಿ ಆಲಿಂಗನ ಮಾಡುವುದು ಸಹಜವಾಗಿದೆ. ಅದು ದಂಪತಿ, ಪ್ರೇಮಿಗಳು, ಪಾಲಕರು-ಮಕ್ಕಳು ಯಾರೇ ಇರಬಹುದು. ಸ್ಪರ್ಶ ಎಂಬುದು ಪ್ರೀತಿಯ ತೋರಿಸುವ ಸಂಕೇತ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕರೊನಾ ವೈರಸ್‌ನಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮನಸ್ಸಿಗೆ ನೋವು ಮಾಡಿಕೊಳ್ಳುವ ಬದಲು ಈ ರೀತಿ ಮಾಡಿ ಎಂದಿದ್ದಾರೆ ಒರಿಟ್‌.

ತಮ್ಮ ಪ್ರಾಧಿಕಾರದ ವತಿಯಿಂದ ಇಂಥದ್ದೊಂದು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರ ಅನುಭವದ ಮಾತುಗಳ ಆಧಾರದ ಮೇಲೆ ಈ ವಿಷಯ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net