

ಅನಂತ್ ಒಡನಾಟ ಮೆಲುಕು ನವದೆಹಲಿಯಿಂದಲೇ ವೆಬಿನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಅನಂತ್ ಕುಮಾರ್ ಅವರೊಂದಿಗೆ ತಮ್ಮ ಒಡನಾಟವನ್ನು ಮೆಲುಕು ಹಾಕಿದರಲ್ಲದೆ, ಕೋವಿಡ್ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಜತೆಗೆ ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ, ಜಯದೇವ ಹೃದೊ್ರೕಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮುಂತಾದವರು ವರ್ಚುವಲ್ ವೇದಿಕೆಯಿಂದಲೇ ಮಾತನಾಡಿದರು.
ಬೆಂಗಳೂರು: ಕರೊನಾ ಸೋಂಕಿನ ನಡುವೆಯೂ ರಾಜ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಜನರಲ್ಲಿಯೂ ಸೋಂಕಿನ ಬಗ್ಗೆ ಸಾಕಷ್ಟು ಜಾಗೃತಿ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಅನಂತಕುಮಾರ್ ಪ್ರತಿಷ್ಠಾನ ‘ಕರೊನಾ ಕಾಲದಲ್ಲಿ ನಾಯಕತ್ವ ಹಾಗೂ ದೇಶ ಮೊದಲು’ ಎಂಬ ವಿಷಯದ ಬಗ್ಗೆ ಭಾನುವಾರ ಏರ್ಪಡಿಸಿದ್ದ ವೆಬಿನಾರ್ನಲ್ಲಿ ಅವರು ಮಾತನಾಡಿದರು.
ಕರೊನಾ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಮುಂಚೂಣಿ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದಲ್ಲಿ ಜನಜೀವನವೂ ಅಷ್ಟೇ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ದೇಶದಲ್ಲೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ನಂ.1 ರಾಜ್ಯ ನಮ್ಮದು ಎಂದರು.
ಇದನ್ನೂ ಓದಿ: ಕೃಷ್ಣ ಮಠ ನಿರ್ವಹಣೆಗೆ ಸಾಲ ಮಾರ್ಗ
ಸಮರ್ಪಕವಾಗಿ ಕರೊನಾ ನಿರ್ವಹಣೆ ರಾಜ್ಯದಲ್ಲಿ ಕರೊನಾ ಸೋಂಕು ಕಾಲಿಟ್ಟ ಆರಂಭದಲ್ಲಿ ನಿಜಕ್ಕೂ ಆತಂಕವಿತ್ತು. ಅದಕ್ಕೆ ಅಗತ್ಯವಾದ ವೈದ್ಯಕೀಯ ಪರಿಕರಗಳಾಗಲಿ, ಸಿದ್ಧತೆಯಾಗಲಿ ಇರಲಿಲ್ಲ. ದಿಢೀರೆಂದು ಎದುರಾದ ಸಂಕಷ್ಟವನ್ನು ಜನರ ಸಹಕಾರ, ಕರೊನಾ ಯೋಧರ ಸ್ಥೈರ್ಯದಿಂದ ಯಶಸ್ವಿಯಾಗಿ ಎದುರಿಸಲಾಯಿತು. ಸರ್ಕಾರವು ಬಲವಾದ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ಕೂಡ ಹಿಮ್ಮೆಟ್ಟಿಸಲಾಯಿತು. ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯಲಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲವನ್ನೂ ನಿಭಾಯಿಸಲಾಯಿತು ಎಂದು ಹೇಳಿದರು.
ದಿನೇದಿನೆ ಅನ್ಲಾಕ್ ಆಗುತ್ತಿದೆ. ಮುಂದಿನ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂದು ಕೆಲ ರಾಜ್ಯಗಳು ಗೊಂದಲದಲ್ಲಿ ಮುಳುಗಿವೆ. ಆದರೆ, ಕರ್ನಾಟಕ ಪ್ರಧಾನಮಂತ್ರಿ ಮೋದಿಯವರ ಸ್ವಾವಲಂಬನೆ ಪರಿಕಲ್ಪನೆಯಡಿ ಮುಂದೆ ಸಾಗುತ್ತಿದೆ. ಇದೇ ಸ್ಪೂರ್ತಿಯೊಂದಿಗೆ ಕೆಲವೇ ಚಟುವಟಿಕೆ ಹೊರತುಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನಾರಾರಂಭಿಸಲಾಗಿದೆ. ತೆರಿಗೆ ಸಂಗ್ರಹದಲ್ಲೂ ಉತ್ತಮ ಪ್ರಗತಿ ಕಂಡುಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರೊನಾನಿಂದ ತೀವ್ರ ಹೊಡೆತಕ್ಕೆ ಗುರಿಯಾಗಿರುವ ಕೈಗಾರಿಕೆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸುಧಾರಣಾ ಕ್ರಮ ಕೈಗೊಂಡಿದೆ. ಮುಖ್ಯವಾಗಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ವಿುಕ ಸುಧಾರಣಾ ಕಾಯ್ದೆ ಸೇರಿ ಹಲವಾರು ಕಾನೂನಾತ್ಮಕ ಕ್ರಮಗಳನ್ನು ತ್ವರಿತವಾಗಿ ಕೖಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅನಂತಕುಮಾರ್ ಪ್ರತಿಷ್ಠಾನದ ತೇಜಸ್ವಿನಿ ಅನಂತಕುಮಾರ್, ಶಾಸಕ ರವಿ ಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು.