ಕೃಷ್ಣ ಮಠ ನಿರ್ವಹಣೆಗೆ ಸಾಲ ಮಾರ್ಗ

state-3
Published on

ಉಡುಪಿ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೃಷ್ಣ ಮಠದ ಆದಾಯ ಸಂಪೂರ್ಣ ಕುಸಿದಿದ್ದು, ಮಠದ ನಿರ್ವಹಣೆಗಾಗಿ ಒಂದು ಕೋಟಿ ರೂ. ಸಾಲ ನೀಡುವಂತೆ ಬ್ಯಾಂಕ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಪರ್ಯಾಯ ಅದಮಾರು ಮಠದ ಮೂಲಗಳು ತಿಳಿಸಿವೆ.

ಕರೊನಾ ನಿಯಮ ಕಾರಣಕ್ಕೆ ಮಾ.22ರಿಂದಲೇ ಕೃಷ್ಣಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಐದು ತಿಂಗಳಿನಿಂದ ಭಕ್ತರಿಂದ ಬರುವ ಆದಾಯ ನಿಂತಿದೆ. ಈ ಅವಧಿಯಲ್ಲಿ ಮಠದ ಸಿಬ್ಬಂದಿ ವೇತನ, ನೈವೇದ್ಯ, ಪೂಜೆ ಸಾಮಗ್ರಿ ಸೇರಿ ಒಟ್ಟಾರೆ ನಿರ್ವಹಣೆಗೆ 1.5 ಕೋಟಿ ರೂ. ಖರ್ಚಾಗಿದೆ. ಇನ್ನೆಷ್ಟು ದಿನ ಈ ಪರಿಸ್ಥಿತಿ ಮುಂದುವರಿಯುವುದೋ, ಅಷ್ಟು ದಿನ ಪರ್ಯಾಯ ಅದಮಾರು ಶ್ರೀಗಳೇ ಕೃಷ್ಣ ಮಠವನ್ನು ನಿರ್ವಹಿಸಬೇಕು. ಮಠದಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಠದಲ್ಲಿ 150 ಹಾಗೂ ಮನೆಯಲ್ಲಿ 150 ಮಂದಿ ಇದ್ದಾರೆ. ಇವರಿಗೆ ವೇತನ ನೀಡಲಾಗುತ್ತಿದೆ. ಪ್ರತಿನಿತ್ಯ 300ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ, ತೆಂಗಿನಕಾಯಿ, ತುಪ್ಪ, ಎಳ್ಳೆಣ್ಣೆ, ಪೂಜಾ ಸಾಮಗ್ರಿ, ಗೋಶಾಲೆ ನಿರ್ವಹಣೆ ಸೇರಿ ತಿಂಗಳಿಗೆ 30 ಲಕ್ಷದಿಂದ ರಿಂದ 40 ಲಕ್ಷ ರೂ. ವೆಚ್ಚವಾಗುತ್ತಿದೆ. 1 ಲಕ್ಷದಿಂದ 1.5 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಮಾಡಬೇಕಿದೆ.

ಆರ್ಥಿಕ ನಿರ್ವಹಣೆಗಾಗಿ ಅದಮಾರು ಮಠದಿಂದ ಕೃಷ್ಣ ಮಠ ಸಾಲ ರೂಪದಲ್ಲಿ 60 ಲಕ್ಷ ರೂ. ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕೃಷ್ಣ ಮಠಕ್ಕೆ ಆದಾಯ ಬಾರದಿದ್ದರೆ ಬ್ಯಾಂಕ್​ನಲ್ಲಿ ಮಾಡಿದ ಸಾಲವನ್ನು ಅದಮಾರು ಮಠದ ವತಿಯಿಂದಲೇ ಪಾವತಿಸಬೇಕಿರುವುದು ಮಠಕ್ಕೆ ಸಂಕಷ್ಟ ತಂದೊಡ್ಡಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net