

ಹೈದರಾಬಾದ್: ಕಾನೂನು ಬಾಹಿರವಾಗಿ, ಒಂದು ಲಕ್ಷಕ್ಕೆ ಮಾರಾಟವಾಗಿದ್ದ ನವಜಾತ ಶಿಶುವನ್ನು ಪೊಲೀಸರು ರಕ್ಷಿಸಿದ ಘಟನೆ ಹೈದರಾಬಾದ್ನ ನಚರಾಮ್ನಲ್ಲಿ ನಡೆದಿದೆ.
ಶಿಶುವನ್ನು ಮಾರಾಟ ಮಾಡಿದ ದಂಪತಿ ಹಾಗೂ ಅದಕ್ಕೆ ಸಹಾಯ ಮಾಡಿದ ಮಧ್ಯವರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೀನಾ ಎಂಬಾಕೆ ತನ್ನ ಮೊದಲ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಳು. ಆದರೆ ಆ ಇಬ್ಬರೂ ಹುಟ್ಟಿ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೂರನೇ ಬಾರಿ ಮೀನಾ ಗರ್ಭಿಣಿಯಾದಾಗ ಮತ್ತೆ ಹೆಣ್ಣು ಮಗು ಆಗಿಬಿಟ್ಟರೆ, ಅದರ ಖರ್ಚು, ವೆಚ್ಚಗಳ ಬಗ್ಗೆ ಭಯಗೊಂಡು ನಾಲ್ಕು ತಿಂಗಳಾದಾಗಲೇ ಮಾರಲು ನಿರ್ಧರಿಸಿದರು. ಅದರಂತೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಕೆಲಸ ಮಾಡುತ್ತಿದ್ದ ಓರ್ವಳು ಮಗುವನ್ನು ಖರೀದಿಸಲು ಮುಂದೆ ಬಂದು, 1 ಲಕ್ಷ ರೂ.ಆಫರ್ ಮಾಡಿದರು.
ಹಾಗೇ ಮೀನಾಗೆ ಹೆರಿಗೆಯಾಗುತ್ತಿದ್ದಂತೆ ಜಾನಕಿ ಒಂದು ಲಕ್ಷ ರೂ.ತಂದು, ಮಗುವನ್ನು ಕೊಡುವಂತೆ ಹೇಳಿದಳು. ಆದರೆ ಮೀನಾಗೆ ಈ ಬಾರಿ ಗಂಡು ಮಗು ಆಗಿದ್ದರಿಂದ ದಂಪತಿ ಮನಸು ಬದಲಿಸಿದ್ದರು. ನಾವು ಮಗುವನ್ನು ಕೊಡುವುದಿಲ್ಲ ಎಂದು ಜಾನಕಿಗೆ ಹೇಳಿದರು. ಇದನ್ನೂ ಓದಿ: ಮದ್ವೆಯಾಗಿ ವರ್ಷ ಕಳೆದಿಲ್ಲ ಮಾವನಿಂದಲೇ ಸೊಸೆ ಗರ್ಭಿಣಿ?: ಆ ಒಂದು ಮಾತಿಗೆ ಅತ್ತೆಯ ಹತ್ಯೆ!
ಇದರಿಂದ ಸಿಟ್ಟಿಗೆದ್ದ ಜಾನಕಿ, ಮಗುವನ್ನು ಕೊಡದೆ ಇದ್ದರೆ ಮುಂದೆ ಪರಿಣಾಮ ಭೀಕರವಾಗಿರುತ್ತದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದರು. ಮೊದಲೇ ಬಡತನದಿಂದ ಬೇಯುತ್ತಿದ್ದ ಮೀನಾ ಮತ್ತು ಆಕೆಯ ಪತಿ ರಾಜೇಶ್ವರ್ ಜಾನಕಿ ಬೆದರಿಕೆಗೆ ಹೆದರಿ ಮಗುವನ್ನು ಕೊಟ್ಟರು. ಅದಾದ ಬಳಿಕ ರಾಚಕೊಂಡ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಇದೀಗ ಪೊಲೀಸರು ದಂಪತಿ ಹಾಗೂ ಜಾನಕಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.