

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆದಷ್ಟು ಬೇರೆ ಯಾವ ಕ್ಷೇತ್ರವೂ ಬೆಳೆದಿಲ್ಲ. ವಾಣಿಜ್ಯ ಬ್ಯಾಂಕ್‌ಗಳ ತವರೂರಾಗಿದ್ದ ನಮ್ಮ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಉತ್ತಮ ಸೇವೆಯಿಂದಾಗಿ ಜನರಿಗೆ ಹತ್ತಿರವಾಗುತ್ತಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಕ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತ ಸಂಭ್ರಮ ಕಾರ್ಯಕ್ರಮ ಪ್ರಯುಕ್ತ ಪಡುಬಿದ್ರಿ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಬೇಕು. ಅವರ ದುಃಖ ದುಮ್ಮಾನಗಳಿಗೆ ಕಿವಿಯಾಗಬೇಕು ಎನ್ನುವ ಚಿಂತನೆ ಇಟ್ಟುಕೊಂಡು ಮಾಡಿದ ದೂರದೃಷ್ಟಿಯಿಂದ ಹಿರಿಯರು ಮಾಡಿದ ವ್ಯವಸ್ಥೆ ಇಂದು ಜನ ಸಾಮಾನ್ಯರ ಬ್ಯಾಂಕ್ ಆಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಪಡುಬಿದ್ರಿ ಗಣಪತಿ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಅನಂತ ಪಟ್ಟಾಭಿರಾವ್, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್ ಪುತ್ರನ್, ಕಾರ್ಯಕ್ರಮ ಸಂಚಾಲಕ ನಿಖಿಲ್ ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಬಹುಮಾನಿತರ ಪಟ್ಟಿ ವಾಚಿಸಿದರು. ನಿರ್ದೇಶಕ ಶ್ರೀಧರ ಪಿ.ಎಸ್.ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.
ಎಂ.ಎನ್.ರಾಜೇಂದ್ರ ಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊಡವೂರು ಮತ್ತು ಕಂಬದಕೋಣೆ ಸೊಸೈಟಿ ಅಧ್ಯಕ್ಷರಾದ ಕೆ.ನಾರಯಣ ಬಲ್ಲಾಳ್, ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಹಕಾರ ಸಪ್ತ ಸಂಭ್ರಮ ಕಾರ್ಯಕ್ರಮಕ್ಕೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಬಳಿಕ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.