ಗ್ರಾಮದ ಹಿತ ಕಾಪಾಡಲು ಸಹಕಾರ

Upp_village
Published on

ಉಪ್ಪಿನಂಗಡಿ: ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಗ್ರಾಮದ ಹಿತ ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಹೇಳಿದರು. ಇಲ್ಲಿನ ಗ್ರಾ.ಪಂ. ಸಮಾಜ ಮಂದಿರದಲ್ಲಿ ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಅಭಿಯಾನದ ನೋಡಲ್ ಅಧಿಕಾರಿಯಾಗಿ ಕರೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್ ಪಟ್ಟಣದ ಬಹುತೇಕ ಉದ್ಯಮಗಳ ತ್ಯಾಜ್ಯ ನೀರು ನೇರ ಪಂಚಾಯಿತಿ ಚರಂಡಿಗಳಿಗೆ ಬಿಡಲಾಗುತ್ತಿದೆ. ಇದು ನೇರ ದೇವಳದ ವಠಾರದ ಕುಮಾರಧಾರಾ ನದಿಗೆ ಹರಿದು ನದಿ ಮಲೀನವಾಗುತ್ತಿದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಹಿರಿಯ ಸದಸ್ಯ ಯು.ಟಿ.ಮಹಮ್ಮದ್ ತೌಸಿಪ್, ಈಗಾಗಲೇ ಗ್ರಾಮ ವ್ಯಾಪ್ತಿಯ ಒಳಚರಂಡಿ ಅವಶ್ಯಕತೆ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಅವಶ್ಯಕತೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಎಲ್ಲರ ಸಹಕಾರ ದೊರೆತರೆ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಗ್ರಾ.ಪಂ. ಸದಸ್ಯ ಅಬ್ದುಲ್ ರಶೀದ್ ಮಾತನಾಡಿದರು. ಗ್ರಾಮಸ್ಥರಿಂದ ವಿವಿಧ ಚರ್ಚೆಗಳು ನಡೆದು ಶ್ರಮದಾನದ ಮೂಲಕ ಎಲ್ಲ ವಾರ್ಡ್‌ಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನೋಡಲ್ ಅಧಿಕಾರಿ ಕೇಳಿಕೊಂಡರು. ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಉದ್ಯಮಿಗಳಾದ ಕರುಣಾಕರ ಸುವರ್ಣ, ಕೈಲಾರ್ ರಾಜಗೋಪಾಲ ಭಟ್, ಧಾರ್ಮಿಕ ಕೇಂದ್ರ ಪ್ರಮುಖರಾದ ಕೆ.ರಾಮಕೃಷ್ಣ ಪ್ರಭು, ಉದಯ ಶಂಕರ ಪ್ರಭು, ಎಚ್.ಇಸುಬು, ಸ್ವಚ್ಛತಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆಂಪಿ, ಭಾರತಿ ಮತ್ತಿತರರು ಉಪಸ್ಥಿತರಿದ್ದರು. ಪಿ.ಡಿ.ಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಾರ‌್ಯದರ್ಶಿ ಗೀತಾ ಶೇಖರ ವಂದಿಸಿದರು.

ಘನತ್ಯಾಜ್ಯ ನಿರ್ವಹಣೆಯೇ ಒಂದು ತಲೆ ನೋವಾಗಿ ಪರಿಣಮಿಸಿದೆ. ಇದರ ನಿರ್ವಹಣೆಗೆ ಪ್ರತ್ಯೇಕ ಜಾಗ ಗುರುತಿಸುವಲ್ಲಿ ಅಧಿಕಾರಿಗಳು ಸ್ಪಂದಿಸದೆ ಇದ್ದು ಸಂಕಟ ಪಡುವಂತಾಗಿದೆ. ದಿನನಿತ್ಯ ವರ್ತಕರಿಂದ ಸಂಗ್ರಹಿಸಿದ ತ್ಯಾಜ್ಯ ಘನತ್ಯಾಜ್ಯ ಬದಲಿ ಗ್ರಾಮಕ್ಕೆ ಕಳುಹಿಸಿ ವಿಲೇವಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಜಾಗ ಒದಗಿಸಿಕೊಡಬೇಕು. ಅಬ್ದುಲ್ ರಶೀದ್, ಗ್ರಾ.ಪಂ. ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net