

ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದುರಸ್ತಿಗೆ ಈಗಾಗಲೇ ಸರ್ಕಾರದಿಂದ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಈವರೆಗೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಶಾಸಕ ಭವನ-5ರಲ್ಲಿ ಬುಧವಾರ ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಬಗ್ಗೆ ನಡೆದ ಸಭೆಯಲ್ಲಿ ಅಡ್ಡೂರು ಸೇತುವೆ ದುರಸ್ತಿ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.
ಅಡ್ಡೂರು ಸೇತವೆ ಶಿಥಿಲಗೊಂಡಿರುವುದರಿಂದ ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಈ ಸೇತುವೆಯಲ್ಲಿ ಬಸ್ಸು ಸೇರಿದಂತೆ ದೊಡ್ಡ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುತ್ತಾರೆ. ಬಸ್ಸು ಸಂಚಾರ ಇಲ್ಲದೆ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಹಾಗೂ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿರುತ್ತದೆ. ಈ ಸೇತುವೆಯ ಪುನಃನಿರ್ಮಾಣಕ್ಕೆ 50 ಕೋಟಿ ರೂ. ಬೇಕಾಗಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ತಿಗೊಳಿಸಲು ಸರ್ಕಾರದಿಂದ 6 ಕೋಟಿ ರೂ.ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದರೂ ಕಾಮಗಾರಿ ಆರಂಭಕ್ಕೆ ವಿಳಂಬಗೊಳಿಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜೇಶ್ ನಾಯ್ಕ ಸಭೆಯಲ್ಲಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ.ಸತ್ಯನಾರಾಯಣ ಅವರು ಅಡ್ಡೂರು ಸೇತುವೆಯ ದುರಸ್ತಿ ಕಾಮಗಾರಿಯನ್ನು ಮುಂದಿನ ಮೂರು ದಿನಗಳೊಳಗೆ ಆರಂಭಿಸಲಾಗುವುದು ಹಾಗೂ ಈ ಸೇತುವೆಯ ಪುನಃನಿರ್ಮಾಣಕ್ಕೆ ಸಂಬಂಧಿಸಿದಂತೆ 50 ಕೋಟಿ ರೂ.ಅನುದಾನ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಭರವಸೆಗಳ ಸಮಿತಿ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧೀನ ಕಾರ್ಯದರ್ಶಿ ಎಸ್.ರಾಜಣ್ಣ, ಲೋಕೋಪಯೋಗಿ ಇಲಾಖೆ ಐಎಫ್‌ಎ ಡಾ.ಸೋಮನಾಥ್, ಕೆ.ಆರ್.ಡಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಲಿಂಗಮೂರ್ತಿ ಜಿ., ರಾಜ್ಯ ಹೆದ್ದಾರಿ ಯೋಜನಾ ನಿರ್ದೇಶಕ ಜಗನ್ನಾಥ ಹಾಗೂ ಶಿವಮೊಗ್ಗ ವೃತ್ತ ಮತು ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.