ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ

10blrp1
Published on

ಬೇಲೂರು: ಜನಸಾಮಾನ್ಯರ ಆರೋಗ್ಯ ಕಾಪಾಡುವುದು ಹಾಗೂ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳು, ಅವರ ಸಂಬಂಧಿಕರು ಸಾಂಕ್ರಾಮಿಕ ರೋಗಗಳಿಂದ ಪಾರಾಗುವಂತೆ ಮಾಡುವ ಉದ್ದೇಶದಿಂದ ಪುರಸಭೆಯಿಂದ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ತಿಳಿಸಿದರು.


ಪಟ್ಟಣದ ತಾಲೂಕು ಆಸ್ಪತ್ರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪುರಸಭೆಯಿಂದ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ವಿವಿಧೆಡೆ ಡೆಂೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ. ಈಗಾಗಲೇ ಬೇಲೂರು ಪಟ್ಟಣದ 23 ವಾರ್ಡ್‌ಗಳಿಗೂ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆ ಮಾಡಿಸಲಾಗಿದೆ. ಆದರೆ ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಗೆ ಸಾಕಷ್ಟು ರೋಗಿಗಳು ಚಿಕಿತ್ಸೆಗೆಂದು ಬರುವುದರಿಂದ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಸ್ಪತ್ರೆ ಆವರಣ ಹಾಗೂ ಸಮೀಪದ ಅಂಗಡಿ ಮುಂಗಟ್ಟು, ಹೋಟೆಲ್‌ಗಳ ಆವರಣಗಳಲ್ಲೂ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸಲಾಗುತ್ತಿದೆ ಎಂದರು.


ಪಟ್ಟಣದ ನಿವಾಸಿಗಳು ತಮ್ಮ ಮನೆ ಸುತ್ತಲು ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯಯುತ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು. ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಪುರಸಭೆಯಿಂದ ಕರಪತ್ರಗಳ ಮೂಲಕ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಪಟ್ಟಣದ ವಿವಿಧೆಡೆ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.


ಪುರಸಭೆ ಸದಸ್ಯೆ ಉಷಾ, ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ಆರೋಗ್ಯಾಧಿಕಾರಿಗಳಾದ ಲೋಹಿತ್, ಜ್ಯೋತಿ, ವಿಶ್ವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net