

ಗದಗ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ (Engineer) ಒಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಗದಗದಲ್ಲಿ ಬಂದಿದೆ.
ಗದಗ ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಪಲ್ಲವಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಶಂಕರ್ಗೌಡ ಪಾಟೀಲ್ (54) ಎಂದು ಗುರುತಿಸಲಾಗಿದೆ. ಇವರು ನಿರ್ಮಿತಿ ಕೇಂದ್ರದಲ್ಲಿ ಗುತ್ತಿಗೆ ಆಧಾರಲ್ಲಿ ಕೆಲಸ ಮಾಡುತ್ತಿದ್ದರು.
ಬೆಳಗ್ಗೆ 7:30ರ ಸುಮಾರಿಗೆ ಶಂಕರ್ಗೌಡ ಪಾಟೀಲ್ ಮನೆಯಿಂದ ಹೊರಟಿದ್ದು, ಪಲ್ಲವಿ ಲಾಡ್ಜ್ನಲ್ಲಿ ರೂಂ ನಂಬರ್ 513ಅನ್ನು ಬಾಡಿಗೆಗೆ ಪಡೆದಿದ್ದಾರೆ. ಸುಮಾರು ಗಂಟೆಗಳ ಕಾಲ ರೂಮಿನಿಂದ ಹೊರಬಾರದಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಪರಿಶೀಲಿಸಿದಾಗ ಶಂಕರ್ಗೌಡ ಪಾಟೀಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆ ಹಿಂದಿನ ಕಾರಣವನ್ನು ಹುಡುಕುತ್ತಿದ್ದಾರೆ. ಈಗಾಗಲೇ ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಿಂದ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರವು ಇದೀಗ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದು, ಈ ವಿಚಾರ ವಿಪಕ್ಷಗಳಿಗೆ ಸರ್ಕಾರದ ಮೇಲೆ ಚಾಟಿ ಬೀಸಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.