ಬೆಂಗಳೂರು: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಕಲುಷಿತಗೊಂಡಿರುವ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ರಮೇಶ್ ಎಲ್.ನಾಯ್ಕ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯನ್ಯಾಯಮೂತಿ ಎನ್. ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ ಸರ್ಕಾರದ ವಿವಿಧ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿದೆ ಹಾಗೂ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ ?
ಅರ್ಜಿಯಲ್ಲಿ ಕುಡಿಯುವ ನೀರನ್ನು ಮಾಲಿನ್ಯವಾಗದಂತೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ನೀರಿನ ಮೂಲಗಳನ್ನು ಆಗಾಗ್ಗೆ ಪರಿಶೀಲಿಸಬೇಕು. ಹಳೆಯ ನೀರಿನ ಕೊಳವೆಗಳು ಪರಿಶೀಲಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಗಳಿಗೊಮ್ಮೆ ನೀರು ಸಂಗ್ರಹಿಸುವ ಘಟಕಗಳನ್ನು ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿ ಮಾಡಲಾಗಿದೆ.
ಯಾವುದೇ ಪ್ರತಿಕ್ರಿಯೆಯಿಲ್ಲ…..
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ರಾಯಚೂರು, ಚಿತ್ರದುರ್ಗ, ಮತ್ತು ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಮರುಕಳಿಸುತ್ತಿವೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವು ಬಾರಿ ಸಂಬಂಧ ಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೀವನದ ಹಕ್ಕು ಖಾತರಿ ಪಡಿಸುವ ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪಡೆಯುವುದು ಸಹಾ ಸಂವಿಧಾನದ ಹಕ್ಕಾಗಿದೆ. ಆದರೂ ಕುಡಿಯುವ ನೀರು ಕಲುಷಿತಿವಾಗದಂತೆ ನಿಯಂತ್ರಣ ಮಾಡಲು ಸರ್ಕಾರದ ಪ್ರಾಧಿಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ. ಇದೇ ಕಾರಣದಿಂದ ರಾಜ್ಯದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ. ಈ ಮುಖೇನ ಸಂವಿಧಾನ ಪರಿಚ್ಛೇದ 21 ಹಾಗೂ ರಾಜ್ಯ ಜಲ ನೀತಿ 2022 ’ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.