

ಬೆಂಗಳೂರು: ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸುವ ಅಭ್ಯಾಸವನ್ನು ಹೊಂದಿದ್ದರೆ ಇಂದೇ ಬಿಟ್ಟು ಬಿಡಿ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಹೆಚ್ಚು ಉಪ್ಪನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ತಿಳಿಸುತ್ತದೆ.
ಈ ಅಧ್ಯಯನದ ಪ್ರಕಾರ, ಉಪ್ಪನ್ನು ಹೆಚ್ಚಾಗಿ ಸೇವಿಸುವುದು ಸೂಕ್ತವಲ್ಲ. ಮಿತಿ ಮೀರಿ ಉಪ್ಪನ್ನು ಸೇವಿಸುವುದು ಇತರ ಕಾಯಿಲೆ ಅಥವಾ ಬೇಡವಾದ ಅಭ್ಯಾಸಗಳಿಗೆ ಕಾರಣವಾಗಬಹುದು. ಸೋಡಿಯಂ ಒಂದು ಗುಪ್ತ ಅಂಶವಾಗಿದೆ ಮತ್ತು ಅದನ್ನು ಅಳೆಯುವುದು ಕಷ್ಟ ಎಂದು ತಜ್ಞರು ಸೂಚಿಸುತ್ತಾರೆ. ಆದ್ದರಿಂದ, ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಸೋಡಿಯಂ ಅನ್ನು ಸೇವಿಸುತ್ತಾನೆ ಎಂದು ಅಂದಾಜು ಮಾಡುವುದು ಕಷ್ಟ.
ಸೋಡಿಯಂ ವಿಸರ್ಜನೆಯ ಮೂಲಕ ಅಳೆಯಲು ಉತ್ತಮ ಮಾರ್ಗವಾಗಿದೆ. ಸ್ಪಾಟ್ ಟೆಸ್ಟ್‌ನ ಸಹಾಯದಿಂದ ಸೋಡಿಯಂ ಸೇವನೆಯನ್ನು ಅಂದಾಜು ಮಾಡುವುದು ಸುಲಭ ಎಂದು ಸಂಶೋಧಕರು ಹೇಳುತ್ತಾರೆ. ಈ ಪರೀಕ್ಷೆಯು ವ್ಯಕ್ತಿಯ ಮೂತ್ರದ ಮಾದರಿಯಲ್ಲಿ ಉಪ್ಪಿನ ಅಂಶವನ್ನು ಪರಿಶೀಲಿಸುತ್ತದೆ. ಆದಾಗ್ಯೂ, ಸೋಡಿಯಂ ಸೇವನೆಯು ಪ್ರತಿದಿನ ಬದಲಾಗುವ ಸಾಧ್ಯತೆಯಿದೆ.
ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ ಸಾಕಷ್ಟಿರುತ್ತದೆ. ಹಾಗಾಗಿ ಇದನ್ನು ಹೆಚ್ಚು ಸೇವಿಸುವುದರಿಂದ ಹೃದಯ ಸಂಬಂಧಿ ಹಾಗೂ ರಕ್ತದೊತ್ತಡದ ಸಮಸ್ಯೆಗಳು ಬಹುವಾಗಿ ಕಾಡುತ್ತವೆ.
ಅಧಿಕ ಉಪ್ಪು ಸೇವನೆ ಮಾಡುವವರ ಮೂತ್ರಪಿಂಡ ಬಹುಬೇಗ ಹಾನಿಗೊಳಗಾಗುತ್ತದೆ. ರಕ್ತದೊತ್ತಡ ಹೆಚ್ಚಿಸುವ ಉಪ್ಪನ್ನು ಕಡಿಮೆ ಬಳಸುವುದರಿಂದ ಬಿಪಿ ಸಮಸ್ಯೆಯಿಂದಲೂ ದೂರವಿರಬಹುದು.
ಪುಡಿ ಉಪ್ಪು ತಯಾರಿಕೆಗೆ ಹಲವು ರಾಸಾಯನಿಕಗಳನ್ನು ಬಳಸುವುದರಿಂದ ಇದನ್ನು ಕಡಿಮೆ ಬಳಕೆ ಮಾಡಿದಷ್ಟು ಒಳ್ಳೆಯದು. ಇದರಲ್ಲಿ ನೈಸರ್ಗಿಕ ಉಪ್ಪಿನ ಅಂಶಗಳಿರುವುದಿಲ್ಲ. ಇದರ ತಯಾರಿ ವೇಳೆ ಬಳಸುವ ಬ್ಲೀಚ್ ನ ಪ್ರಮಾಣ ಥೈರಾಯ್ಡ್ ಗ್ರಂಥಿಗೂ ಹಾನಿ ಉಂಟು ಮಾಡುತ್ತದೆ.
ಹೆಚ್ಚು ಉಪ್ಪು ಸೇವನೆ ನಿಮ್ಮ ದೇಹಕ್ಕೆ ಕಡಿಮೆ ಆಮ್ಲಜನಕವನ್ನು ಪೂರೈಸುತ್ತದೆ. ಅದರೊಂದಿಗೆ ನಿಮ್ಮ ತ್ವಚೆ ಬಹುಬೇಗ ಸುಕ್ಕಾಗುತ್ತದೆ. ಉಪ್ಪಿನ ಬಳಕೆ ಕಡಿಮೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ದೂರವಿರಬಹುದು.
ಆಗಾಗ್ಗೆ ಮೂತ್ರ ವಿಸರ್ಜನೆಯು ನೀವು ಹೆಚ್ಚು ಉಪ್ಪನ್ನು ಸೇವಿಸುತ್ತಿರುವಿರಿ ಎಂಬುದರ ಒಂದು ಸಂಕೇತವಾಗಿದೆ. ಹೆಚ್ಚಿನ ಸಮಯ, ಮೂತ್ರ ವಿಸರ್ಜನೆಗಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವ ತುರ್ತು ಅಗತ್ಯವನ್ನು ನೀವು ಅನುಭವಿಸಬಹುದು. ಆದರೆ ಇದು ಕೆಲವು ಕಾಯಿಲೆಗಳಿಗೆ ಎಡೆಮಾಡಿಕೊಡಬಹುದು.
ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದ ವಿವಿಧ ಭಾಗಗಳಲ್ಲಿ ಊತ ಉಂಟಾಗುತ್ತದೆ. ಬೆಳಿಗ್ಗೆ ಉಬ್ಬುವುದು ಅನುಭವಿಸಲು ಇದು ಒಂದು ಕಾರಣವಾಗಿರಬಹುದು.ನೀವು ಆಗೊಮ್ಮೆ ಈಗೊಮ್ಮೆ ಸೌಮ್ಯವಾದ ತಲೆನೋವು ಅನುಭವಿಸುತ್ತಿದ್ದೀರಾ? ಈ ತಲೆನೋವು ನಿರ್ಜಲೀಕರಣದಿಂದ ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿರ್ಜಲೀಕರಣದ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ತಲೆನೋವು ಬರುವ ಸಾಧ್ಯತೆಯಿದೆ. ಈ ತಲೆನೋವನ್ನು ಹೋಗಲಾಡಿಸಲು ಸಾಕಷ್ಟು ನೀರು ಕುಡಿಯಿರಿ.