ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ

gur_mutturu
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮುತ್ತೂರು ಗ್ರಾಪಂ ವ್ಯಾಪ್ತಿಯ ಕುಳವೂರು ಗ್ರಾಮದ ಅಟ್ಟೆಪದವಿನ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸುವ ವಿಚಾರದಲ್ಲಿ ಭಾನುವಾರ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಜಟಾಪಟಿ ನಡೆದಿದೆ. ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸ್ ಮತ್ತು ಗುರುಪುರ ಹೋಬಳಿ ಕಂದಾಯ ನಿರೀಕ್ಷಕರು ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡಿದ್ದಾರೆ.

ಅಟ್ಟೆಪದವಿನ ಸರ್ವೇ ನಂಬರ್ 35ರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಈಗಾಗಲೇ ಮನೆ ನಿರ್ಮಿಸಿಕೊಂಡಿದ್ದು, ಮಿಕ್ಕುಳಿದ ಜಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಈ ವಿಷಯ ಬಿಜೆಪಿ-ಕಾಂಗ್ರೆಸ್ಸಿಗರ ಸಂಘರ್ಷಕ್ಕೆ ಕಾರಣವಾಗಿದೆ. ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಆಕ್ಷೇಪವೆತ್ತಿರುವ ಮುತ್ತೂರು ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು, ಕಾಮಗಾರಿ ತಡೆಯಲು ಮುಂದಾದಾಗ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಸಂಘರ್ಷ ಉಂಟಾಗಿದೆ.

ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ. ತಕ್ಷಣ ತೆರವುಗೊಳಿಸಬೇಕು ಎಂದು ಸ್ಥಳಕ್ಕಾಗಮಿಸಿದ ಗುರುಪುರ ಹೋಬಳಿ ಕಂದಾಯ ನಿರೀಕ್ಷಕ ಪೂರ್ಣಚಂದ್ರ ಮತ್ತು ಗ್ರಾಮ ಕರಣಿಕ ಮುತ್ತಪ್ಪ ಅವರಲ್ಲಿ ಮುತ್ತೂರು ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರು ಆಗ್ರಹಿಸಿ, ಆಕ್ಷೇಪ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗರ ಆಗ್ರಹಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರಿ ಜಾಗದಲ್ಲಿರುವ ಅಕ್ರಮ ಕಟ್ಟಡಗಳ ತೆರವುಗೊಳಿಸುವುದಿದ್ದರೆ, ಬಿಜೆಪಿ ಕಾರ್ಯಕರ್ತರ ಅಕ್ರಮ ನಿರ್ಮಾಣಗಳ ಸಹಿತ ಎಲ್ಲ ಕಟ್ಟಡ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎರಡೂ ಪಕ್ಷ ಕಾರ್ಯಕರ್ತರಿಗೆ ಕಂದಾಯ ಅಧಿಕಾರಿಗಳು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net