ಸರ್ಕಾರದ ಅನುದಾನವಿಲ್ಲದೆ ಅದ್ಭುತ ದೇವಸ್ಥಾನ ನಿರ್ಮಾಣ

dk
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕುಮಾರಗುರು ತಂತ್ರಿಗಳು ದೇವರ ಪ್ರಸಾದ ನೀಡಿ ಗೌರವಿಸಿದರು.
Published on

ಪಡುಬಿದ್ರಿ: ಸರ್ಕಾರದ ಅನುದಾನವಿಲ್ಲದೆ ಭಕ್ತರು ಸ್ವಇಚ್ಛೆಯಿಂದ ನೀಡಿದ ಹಣದಲ್ಲಿ ಇಷ್ಟು ದೊಡ್ಡ ದೇವಳ ಕಟ್ಟಿದ್ದು ಅದ್ಭುತ. ಕಷ್ಟ ದೂರ ಮಾಡಿ, ರಕ್ಷಿಸುವ ಸನ್ನಿಧಾನ ಕಾಪು. ಇಲ್ಲಿ ಜಾತಿ ಇಲ್ಲ. ಎಲ್ಲರೂ ಮಾನವ ಜಾತಿ. ಧರ್ಮ ಎದ್ದು ಕಾಣುತ್ತಿದೆ. ಮಾರಿಯಮ್ಮ ದೇವರ ಗದ್ದುಗೆ ಪ್ರತಿಷ್ಠಾಪನೆಯ ಮೊದಲ ಪ್ರಸಾದ ಸಿಕ್ಕಿದ್ದು ನನ್ನ ಭಾಗ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವರ ಮಹಾಸ್ವರ್ಣಪೀಠದೊಂದಿಗೆ (ಗದ್ದುಗೆ) ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಮಾರಿಯಮ್ಮನ ಪ್ರತಿಷ್ಠಾಪನೆ, ಶ್ರೀ ಉಚ್ಚಂಗಿದೇವಿ ಸ್ವರ್ಣ ಪೀಠದೊಂದಿಗೆ ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಉಚ್ಚಂಗಿದೇವಿ ಪ್ರತಿಷ್ಠಾಪನೆಯಲ್ಲಿ ಭಾನುವಾರ ಪಾಲ್ಗೊಂಡು ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವಳ ತಂತ್ರಿವರ್ಯರು, ಪ್ರಧಾನ ಅರ್ಚಕರು ದೇವಳ ವತಿಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಡಿ.ಕೆ.ಶಿವಕುಮಾರ್ 9,99,999ರೂ. ಮೌಲ್ಯದ ಸ್ವರ್ಣ ಲೇಪಿತ ರಜತ ಬ್ರಹ್ಮಕಲಶ ಸಮರ್ಪಿಸಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಧವ ಪಾಲನ್, ಡಾ.ಸುನೀತಾ ಶೆಟ್ಟಿ, ಮಿಥುನ್ ರೈ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net