ಮದ್ಯಕ್ಕಾಗಿ ಡಾಬಾ ಮಾಲೀಕನ ಜತೆ ಜಗಳ: ಕುಡಿದ ಮತ್ತಿನಲ್ಲಿ ಅನುಚಿತ ವರ್ತನೆ ತೋರಿದ ಪೇದೆ ಅಮಾನತು

PC
Published on

ಹೊಸಪೇಟೆ: ಮದ್ಯಕ್ಕಾಗಿ ಡಾಬಾ ಮಾಲೀಕರೊಂದಿಗೆ ಜಗಳ ಮಾಡಿ, ಅನುಚಿತವಾಗಿ ವರ್ತಿಸಿದ್ದ ಹಿರೇಹಡಗಲಿ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಅರುಣ ಕೆ. ಮಂಗಳವಾರ ಆದೇಶ ಹೊರಡಿಸಿದ್ದಾರೆ. ಠಾಣೆಯ ಎಸ್‌ಬಿ ಕಾನ್ಸಟೇಬಲ್ ಕಲ್ಲೇಶ್ ಗೌಡ ಅಮಾನತುಗೊಳಗಾಗಿದ್ದಾರೆ.

ಜು.೧೭ ರಂದು ಮೈಲಾರ ಕ್ರಾಸ್‌ನಲ್ಲಿರುವ ಡಾಬಾವೊಂದರಲ್ಲಿ ಕಲ್ಲೇಶಗೌಡ ಹಾಗೂ ಇತರೆ ಇಬ್ಬರು ಪೊಲೀಸರು ಊಟ ಮಾಡುತ್ತಿದ್ದರು. ಅವರಿಗೆ ೨ ಬಾಟಲ್ ಮದ್ಯ ಕೊಡುವಂತೆ ಸಪ್ತಗಿರಿ ಡಾಬಾದ ಮಾಲೀಕರು ಕೇಳಿಕೊಂಡು ಬಂದಿದ್ದರು. ಬೇರೆ ಕೆಲಸದಲ್ಲಿದ್ದೇನೆ ಎಂದು ಮದ್ಯ ನೀಡಲು ಹಸಿರು ಮನೆ ಡಾಬಾದ ಗುರುರಾಜ ನಿರಾಕರಿಸಿದ್ದರು.

ಇದರಿಂದ ಕುಪಿತಗೊಂಡಿದ್ದ ಪೇದೆ ಕುಡಿದ ಮತ್ತಿನಲ್ಲಿ ಸಂಜೆ ಗುರುರಾಜ ಜೊತೆ ಜಗಳ ತೆಗೆದಿದ್ದಾನೆ. ಈ ಕುರಿತು ದೂರು ನೀಡಲು ಉಪ ಠಾಣೆಗೆ ಬಂದಿದ್ದ ಗುರುರಾಜ ಮತ್ತು ಆತನ ಪತ್ನಿಯೊಂದಿಗೆ ಜಗಳ ಮಾಡಿ, ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೇದೆ ಕಲ್ಲೇಶಗೌಡ ಅವರನ್ನು ೬ ತಿಂಗಳ ಕಾಲ ಅಮಾನತುಗೊಳಿಸಿ ಎಸ್ಪಿ ಡಾ.ಅರುಣ ಕೆ. ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net