ರಾಜಸ್ಥಾನ ಸ್ಥಳೀಯ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ! ಗೆದ್ದು ಬೀಗಿದ ಕಾಂಗ್ರೆಸ್​

ಚೊನಗರೆಸ್
Published on

ಜೈಪುರ: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ ಕಾಂಗ್ರೆಸ್​ ಬಹುಮತದೊಂದಿಗೆ ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ ಎರಡನೇ ಸ್ಥಾನಕ್ಕೇ ತೃಪ್ತಿ ಪಡುವಂತಾಗಿದೆ.

12 ಜಿಲ್ಲೆಗಳ 50 ಸ್ಥಾನಗಳ ಪೈಕಿ ಕಾಂಗ್ರೆಸ್​ 36 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದ ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ.

ಈ 50 ನಾಗರಿಕ ಸ್ಥಾನಗಳಲ್ಲಿ 7 ನಗರ ಸಭೆ ಮತ್ತು 43 ಪುರಸಭೆ ಸ್ಥಾನಗಳಿವೆ. ನಗರ ಸಭೆಯ 7 ಸ್ಥಾನಗಳಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 1 ಸ್ಥಾನವನ್ನು ಗೆದ್ದಿದೆ. ಇನ್ನೊಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. 50 ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಿ ಪುರುಷ ಅಭ್ಯರ್ಥಿಗಳು ಮತ್ತು 22 ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಈಗಾಗಲೇ ಕಾಂಗ್ರೆಸ್ಸಿನ ದುಷ್ಕೃತ್ಯದಿಂದ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಉಸ್ತುವಾರಿ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಈಗಲೇ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ನಾಲ್ಕನೇ ಮೂರು ಮತಗಳೊಂದಿಗೆ ವಿಜಯ ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net