

ಕಾಂಗ್ರೆಸ್ ಸರ್ಕಾರಗಳ ವಿವಿಧ ಜನಪರ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ರೂ. ಹಣವನ್ನು ಹಾಕುತ್ತಿದ್ದೇವೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾತನಾಡಿದರು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಎರಡು ವರ್ಷವಾಗಿದೆ. ನೀವು ಇದರ ಬಗ್ಗೆ ಜನರಿಗೆ ನೆನಪಿಸುತ್ತಿರಬೇಕು. ನಾವು ಈ ಯೋಜನೆ ಜಾರಿ ಮಾಡಿ ನಿಮ್ಮ ಕೈಗೆ ಅಸ್ತ್ರ ನೀಡಿದ್ದೇವೆ. ನೀವು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ರೈತರ ಉಚಿತ ವಿದ್ಯುತ್ ಗೆ 20 ಸಾವಿರ ಕೋಟಿ, ವಿವಿಧ ಪಿಂಚಣಿ ಯೋಜನೆಗೆ 10 ಸಾವಿರ ಕೋಟಿ, ಪಂಚ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ, ಸಮಾಜ ಕಲ್ಯಾಣ ಯೋಜನೆಗಳಿಗೆ ಸೇರಿ 1 ಲಕ್ಷ ಕೋಟಿಯಷ್ಟು ಹಣವನ್ನು ನಮ್ಮ ಸರ್ಕಾರ ಬಡವರ ಜೇಬಿಗೆ ಹಾಕುತ್ತಿದೆ. ಈ 1 ಲಕ್ಷ ಕೋಟಿ ಹಣದಲ್ಲಿ ಬಿಜೆಪಿ ಅಥವಾ ದಳದವರ ಒಂದು ಕಾರ್ಯಕ್ರಮ ಇದೆಯೇ? ನಾನು ಶಾಸಕನಾಗಿದ್ದಾಗ ಜೆ.ಎಚ್.ಪಟೇಲರ ಕಾಲದಲ್ಲಿ ಪಂಚಾಯ್ತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕೃಷ್ಣ ಅವರ ಕಾಲದಲ್ಲಿ ಅದನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆವು. 27 ಇಲಾಖೆಯನ್ನು ಪಂಚಾಯ್ತಿಗೆ ಸೇರಿಸಿದೆವು. ಪಂಚಾಯ್ತಿಗೆ ಈ ರೀತಿ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
“ಜೆಡಿಎಸ್ ವಿಚಾರಕ್ಕೆ ಬಂದರೆ, ದೊಡ್ಡ ಗೌಡರು, ಅವರ ಮಕ್ಕಳು, ಮೊಮ್ಮಕ್ಕಳು ಯಾವ ತ್ಯಾಗ ಮಾಡಿದ್ದಾರೆ? ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನು? ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಹೊಟ್ಟೆ ತುಂಬಿಸಿದ್ದಾರಾ? ಜಮೀನು ಕೊಟ್ಟಿದ್ದಾರಾ? ರೈತರಿಗೆ ಮೊದಲು ಉಚಿತ ವಿದ್ಯುತ್ ಕೊಟ್ಟಿದ್ದು ಬಂಗಾರಪ್ಪ, ನಾನು ಸಚಿವನಾದ ಸಚಿವನಾದಾಗ 6 ತಾಸು ಇದ್ದ ವಿದ್ಯುತ್ ಅನ್ನು 7 ತಾಸಿಗೆ ಏರಿಸಿದೆ. ಮೊದಲು ಪ್ರತಿ ವರ್ಷ ಇದಕ್ಕಾಗಿ 800 ಕೋಟಿ ನೀಡುತ್ತಿದ್ದೆವು. ಈಗ 20 ಸಾವಿರ ಕೋಟಿ ನೀಡುತ್ತಿದ್ದೇವೆ” ಎಂದು ತಿಳಿಸಿದರು.