CES Meeting | ಬಿಹಾರ ಚುನಾವಣೆ; ಇಂದು ಕಾಂಗ್ರೆಸ್​​ ಕೇಂದ್ರ ಚುನಾವಣಾ ಸಮಿತಿ ಸಭೆ

CES Meeting
Published on

CES Meeting: ಬಿಹಾರ ವಿಧಾನಸಭಾ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಎಲ್ಲ ಪಕ್ಷಗಳು ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿವೆ. ವಿಪಕ್ಷ ಮಹಾಘಟಬಂಧನ್ ಮೈತ್ರಿಕೂಟದೊಳಗೆ ಸೀಟು ಹಂಚಿಕೆ ಮಾತುಕತೆಗಳು ಇಲ್ಲಿಯವರೆಗೆ ಸ್ಥಗಿತಗೊಂಡಿದ್ದು, ಕಾಂಗ್ರೆಸ್​ ಪಕ್ಷ ಬುಧವಾರ(ಅ 8) ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯನ್ನು ನಡೆಸಲಿದೆ ಎಂದು ವರದಿಯಾಗಿದೆ.

ಬಿಹಾರ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಅಜಯ್ ಮಾಕನ್ ಸೇರಿದಂತೆ ಹಿರಿಯ ನಾಯಕರು 50 ಕ್ಕೂ ಹೆಚ್ಚು ಸ್ಥಾನಗಳ ಕುರಿತು ಚರ್ಚಿಸಲಿದ್ದಾರೆ.ಮೈತ್ರಿಕೂಟದೊಳಗೆ ಒತ್ತಡ ಹೇರಲು ಮತ್ತು ಕಾಂಗ್ರೆಸ್ ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಟ್ಟಿದೆ ಎನ್ನುವುದನ್ನು ಒತ್ತಿಹೇಳುವ ಕಾರ್ಯತಂತ್ರದ ಭಾಗವಾಗಿ ಈ ಸಭೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರ ಚುನಾವಣೆ ಸೀಟು ಹಂಚಿಕೆ ಕುರಿತು ಗೊಂದಲವಿದ್ದರೂ, ದೆಹಲಿಯಲ್ಲಿನ ಇಂದಿನ ಕಾಂಗ್ರೆಸ್​​ ಸಭೆ, ತನ್ನ ಮಿತ್ರಪಕ್ಷಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸಿಇಸಿ ಸಭೆಯು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ಪಾಟ್ನಾದಲ್ಲಿರುವ ನಿವಾಸದಲ್ಲಿ ಮಂಗಳವಾರ ತಡರಾತ್ರಿಯವರೆಗೂ ನಡೆದ ಚರ್ಚೆ ಮೈತ್ರಿಕೂಟದ ಮೂರನೇ ಸುತ್ತಿನ ಸಭೆಯಾಗಿದ್ದು, ಆರ್‌ಜೆಡಿ, ಕಾಂಗ್ರೆಸ್, ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಮತ್ತು ಸಿಪಿಐ(ಎಂ) ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ವಿಐಪಿ 40 ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯವಾಗಿ ಮಾತನಾಡಿರುವ ವಿಐಪಿ ಸಂಸ್ಥಾಪಕ ಮುಖೇಶ್ ಸಹಾನಿ, ಮಲ್ಲಾ ಸಮುದಾಯ ತಮ್ಮ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತಿದ್ದು, ಆ ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಮೂಲಕ ವಿರೋಧ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮ ಬೆಂಬಲ ಮೈತ್ರಿಕೂಟಕ್ಕೆ ನಿರ್ಣಾಯಕವಾಗಿದೆ ಎಂದು ವಾದಿಸಿದರು. ಇದೇ ಸಂದರ್ಭದಲ್ಲಿ ವಿಐಪಿ ಮತ್ತು ಕಾಂಗ್ರೆಸ್ ಪ್ರತಿನಿಧಿಗಳ ನಡುವೆ ವಾಗ್ವಾದ ನಡೆದಿದ್ದು, ರಾಹುಲ್ ಗಾಂಧಿ ನೇತೃತ್ವದ 'ಮತದಾರ ಅಧಿಕಾರ ಯಾತ್ರೆ' ಕಳೆದ ಆರು ತಿಂಗಳಿನಿಂದ ವಿರೋಧ ಪಕ್ಷಗಳನ್ನು ಬಲವನ್ನು ಹೆಚ್ಚಿಸಿದೆ ಎಂದು ಕೈ ನಾಯಕರು ಸಮರ್ಥಿಸಿಕೊಂಡರು.

ಸೀಟು ಹಂಚಿಕೆ; ಕಾರ್ಯತಂತ್ರದ ಚೌಕಾಸಿ

ಪ್ರಸ್ತುತ ಉದ್ಭವಿಸಿರುವ ಸೀಟು ಹಂಚಿಕೆ ಬಿಕ್ಕಟ್ಟು, ಚೌಕಾಸಿ ತಂತ್ರದ ಭಾಗವಾಗಿರಬಹುದು, ಸಣ್ಣ ಪುಟ್ಟ ಮಿತ್ರಪಕ್ಷಗಳು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿವೆ ಎಂದು ಕೈ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಜೆಡಿ ಕೆಲವು ಸಣ್ಣ ಪಕ್ಷಗಳೊಂದಿಗೆ ಮೃದುವಾಗಿದ್ದು, ಇದು ಕಾಂಗ್ರೆಸ್‌ನ ಟಿಕೆಟ್​ ಹಕ್ಕನ್ನು ಕಡಿಮೆ ಮಾಡುವ ಹುನ್ನಾರ ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಐಪಿಯಂತಹ ಸಣ್ಣ ಪಕ್ಷಗಳು, ಕೆಲವೇ ಸಮರ್ಥ ಅಭ್ಯರ್ಥಿಗಳನ್ನು ಹೊಂದಿದ್ದು, ಆರ್‌ಜೆಡಿ, ಸಹಾನಿ ಬೇಡಿಕೆ ಇಟ್ಟಿರುವ ಕ್ಷೇತ್ರಗಳಲ್ಲಿ ತನ್ನದೇ ಆದ ನಾಯಕರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ ಎಂದು ಹೇಳಿದರು. ಈ ಮಟ್ಟದ ಉದ್ವಿಗ್ನತೆಯ ಹೊರತಾಗಿಯೂ, ಕಾಂಗ್ರೆಸ್ ತನ್ನ ನಿಲುವಿನಲ್ಲಿ ದೃಢವಾಗಿದ್ದು, ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಮಾನ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎಂದು ಪಕ್ಷ ಒತ್ತಾಯಿಸುತ್ತದೆ. ಈಗಾಗಲೇ ಸಮಗ್ರ ಪರಿಶೀಲನಾ ಕಸರತ್ತು ಪೂರ್ಣಗೊಳಿಸಿದ್ದು, 70 ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net