Zubeen Garg Death | ಜುಬೀನ್ ಗರ್ಗ್ ಸಾವು; ​ಸಹೋದರ ಸಂಬಂಧಿ ಡಿಎಸ್ಪಿ ಸಂದೀಪನ್ ಬಂಧನ!

Zubeen Garg Death
Published on

Zubeen Garg Death: ಆಸ್ಸಾಂ ಗಾಯಕ ಜುಬೀನ್ ಗರ್ಗ್ ನಿಗೂಢ ಸಾವಿನ ತನಿಖೆಗೆ ಸಂಬಂಧಪಟ್ಟಂತೆ ಪೊಲೀಸರು, ಗರ್ಗ್​​ ಸಹೋದರ ಸಂಬಂಧಿ, ಅಸ್ಸಾಂ ಪೊಲೀಸ್ ಅಧಿಕಾರಿ ಡಿಎಸ್ಪಿ ಸಂದೀಪನ್ ಗರ್ಗ್​​ರನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಸಂದೀಪನ್​ ಸಿಂಗಾಪುರದ ವಿಹಾರ ನೌಕೆಯಲ್ಲಿ ಜುಬೀನ್​ರೊಂದಿಗೆ ಇದ್ದರು ಎಂದು ತಿಳಿದುಬಂದಿದೆ.

ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸಿದ ವಿಚಾರಣೆ ಬಳಿಕ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಂದೀಪನ್​ರನ್ನು ವಶಕ್ಕೆ ಪಡೆಯಲಾಗಿದ್ದು, ಈ ಹಿಂದೆ ಜುಬೀನ್​ರ ಅನೇಕ ಆಪ್ತರನ್ನು ವಿಚಾರಣೆ ನಡೆಸಲಾಗಿತ್ತು. ಸಂದೀಪನ್​ರನ್ನು ಇಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಾಲಿವುಡ್ ಮತ್ತು ಅಸ್ಸಾಮಿ ಹಾಡುಗಳಿಗೆ ಹೆಸರುವಾಸಿಯಾಗಿದ್ದ 52 ವರ್ಷದ ಗಾಯಕ ಜುಬೀನ್​, ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ದ್ವೀಪವೊಂದರಲ್ಲಿ ಈಜುವಾಗ ನಿಧನರಾದರು. ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಅಲ್ಲಿಗೆ ಭೇಟಿ ನೀಡಿದ್ದ ವೇಳೆ ವಿಹಾರ ನೌಕೆಯಲ್ಲಿ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸರು, ಸಂದೀಪನ್ ಗರ್ಗ್​​ಕಿಂತ ಮೊದಲು, ಗಾಯಕನ ಬ್ಯಾಂಡ್‌ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ, ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಕಾರ್ಯಕ್ರಮ ಸಂಘಟಕ ಶ್ಯಾಮಕನು ಮಹಂತ ಮತ್ತು ಸಂಗೀತಗಾರ ಅಮೃತಪ್ರವ ಮಹಂತ ಸೇರಿದಂತೆ ಇತರ ನಾಲ್ವರನ್ನು ಬಂಧಿಸಿದ್ದಾರೆ.

ಜುಬೀನ್​ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ಧಾರ್ಥ್ ಶರ್ಮಾ ಮತ್ತು ಸಿಂಗಾಪುರದಲ್ಲಿ ಪ್ರದರ್ಶನ ನೀಡಬೇಕಿದ್ದ ಕಾರ್ಯಕ್ರಮದ ಆಯೋಜಕರು ವಿಷಪ್ರಾಶನ ಮಾಡಿದ್ದಾರೆ ಎಂದು ಶೇಖರ್ ಜ್ಯೋತಿ ಗೋಸ್ವಾಮಿ ಆರೋಪಿಸಿದ್ದರು. ಆರೋಪಿಗಳು ಕೃತ್ಯವನ್ನು ಮುಚ್ಚಿಹಾಕಲು ನಿರ್ದಿಷ್ಟವಾಗಿ ವಿದೇಶಿ ತಾಣವನ್ನು ಆರಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜುಬೀನ್​​ ಪತ್ನಿ ಗರಿಮಾ ಸೈಕಿಯಾ ಗರ್ಗ್ ಕೂಡ ಪತಿಯ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದು, ಸಿಂಗಾಪುರ್ ಪೊಲೀಸರ ಶವಪರೀಕ್ಷೆ ವರದಿಯನ್ನು ಪ್ರಶ್ನಿಸಿ, ಗರಿಮಾ ಗಂಭೀರ ಲೋಪಗಳನ್ನು ಎತ್ತಿ ತೋರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net