ಕಾಂಗ್ರೆಸ್ ಪ್ರಾಯೋಜಿತ ಪತ್ರಿಕಾ ಸಮೂಹದ ಆಸ್ತಿ ಮುಟ್ಟುಗೋಲು

congress
Published on

ನವದೆಹಲಿ: ಕಾಂಗ್ರೆಸ್ ಪಕ್ಷ ಪ್ರಾಯೋಜಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) 16.38 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ.

ಈ ಸಂಬಂಧ ಅದು ಶನಿವಾರ ತಾತ್ಕಾಲಿಕ ಆದೇಶ ಹೊರಡಿಸಿದೆ. ಎಜೆಎಲ್‌ಗೆ ಸೇರಿರುವ, ಮುಂಬೈನಲ್ಲಿರುವ ಒಂಬತ್ತು ಮಹಡಿಯ ಕಟ್ಟಡವನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ.

ಪಂಚಕುಲಾದಲ್ಲಿ ಎಜೆಎಲ್‌ಗೆ ನಿವೇಶನ ಮಂಜೂರು ಮಾಡುವಲ್ಲಿ ಅಕ್ರಮ ನಡೆದಿರುವ ಸಂಬಂಧ ಇ.ಡಿ. ಕಳೆದ ವರ್ಷ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮೋತಿಲಾಲ್ ವೋರಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರನ್ನು ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ವೋರಾ ಎಜೆಎಲ್‌ನ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ನಿಷೇಧ ಕಾನೂನು (ಪಿಎಂಎಲ್‌ಎ) ಅನ್ವಯ 2019ರ ಆಗಸ್ಟ್‌ನಲ್ಲಿ ಚಂಡಿಗಢ ಸಮೀಪದ ಪಂಚಕುಲಾದಲ್ಲಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮುಖ್ಯಮಂತ್ರಿಯಾಗಿದ್ದ ಹೂಡಾ ಅಧಿಕಾರ ದುರುಪಯೋಗಿಸಿಕೊಂಡು ಎಜೆಎಲ್‌ಗೆ ಜಮೀನು ಮಂಜೂರು ಮಾಡಿದ್ದರು. ಮಂಜೂರಾದ ಜಾಗದಲ್ಲಿ ಕಟ್ಟಡ ನಿರ್ಮಾಣದ ಅವಧಿಯನ್ನು ಕೂಡ ಕಾನೂನುಬಾಹಿರವಾಗಿ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ ಎಂದೂ ಇ.ಡಿ. ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net