ಮಾತು, ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಿದ್ದಂತೆ; ಎಚ್​.ಡಿ.ಕುಮಾರಸ್ವಾಮಿಗೆ ತಿಳಿಹೇಳಿದ ರಾಜ್ಯ ಕಾಂಗ್ರೆಸ್…

HDK Congress
Published on

ಬೆಂಗಳೂರು: ದ್ವೇಷದ ಆಧಾರದಲ್ಲಿ ರಾಜಕೀಯ ಮಾಡಬಾರದು. ನಾವು ಬಳಸುವ ಪದಗಳು, ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮಾತಿಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಎಚ್​.ಡಿ.ಕುಮಾರಸ್ವಾಮಿ ನಿನ್ನೆ (ನ.22) ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆಗೆ ತೆರಳಿದ್ದರು. ವೀಕ್ಷಣೆಯ ನಂತರ ಕಾರು ಹತ್ತುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶಗೊಂಡು ಆಡಿರುವ ಮಾತಿನ ವಿಡಿಯೋ ವೈರಲ್ ಆಗಿತ್ತು.

ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಅವರನ್ನು ಸೂ...ಮಗ ಎಂದು ಎಚ್​.ಡಿ.ಕುಮಾರಸ್ವಾಮಿ ಕರೆದಿದ್ದರು. ಇದೀಗ ಎಚ್​.ಡಿ.ಕುಮಾರಸ್ವಾಮಿ ಆಡಿರುವ ಮಾತಿನ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ರೀತಿಯ ಪದಬಳಕೆ ನಿಮಗೆ ಶೋಭೆ ತರುವುದಿಲ್ಲ. ಜತೆಗೆ ರಾಜಕೀಯ ಘನತೆಯನ್ನೂ ಉಳಿಸುವುದಿಲ್ಲ. ಪರಸ್ಪರ ಗೌರವ ಇಟ್ಟುಕೊಂಡೇ ರಾಜಕೀಯ ಮಾಡಬಹುದು ಎಂಬುವುದನ್ನು ಹಿರಿಯರು ತೋರಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿದೆ.

ತನ್ನ ಆಡಿರುವ ಮಾತು ತಪ್ಪು ಎಂಬುವುದು ಅರಿವಾಗುತ್ತಿದ್ದಂತೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೆ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net