

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೆ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ನಿನ್ನೆ (ನ.22) ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆಗೆ ಕುಮಾರಸ್ವಾಮಿ ತೆರಳಿದ್ದರು. ವೀಕ್ಷಣೆಯ ಬಳಿಕ ಕಾರು ಹತ್ತುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಆಡಿರುವ ಮಾತು, ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಟ್ವೀಟ್ ಮಾಡುವ ಮುಖಾಂತರ ಮಾಜಿ ಸಿಎಂ ತನ್ನ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು. ಈ ವಿಚಾರ ನನ್ನ ಗಮನಕ್ಕೆ ಬರುತ್ತಿದ್ದಂತೆ ನನ್ನಲ್ಲಿ ಆಕ್ರೋಶ ಕಾರಣವಾಗಿತ್ತು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.