

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ರಾಜಸ್ಥಾನ ಮತ್ತು ತಮಿಳುನಾಡಿನ ಕ್ಷೇತ್ರಗಳಿಗೆ ಕಾಂಗ್ರೆಸ್ ಸೋಮವಾರ ತನ್ನ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ರಾಜಸ್ಥಾನದ ನಾಲ್ಕು ಮತ್ತು ತಮಿಳುನಾಡಿನ ಒಂದು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದೆ.
ರಾಜಸ್ಥಾನದ ಅಜ್ಮೀರ್ ಲೋಕಸಭಾ ಕ್ಷೇತ್ರಕ್ಕೆ ರಾಮಚಂದ್ರ ಚೌಧರಿ, ರಾಜಸಮಂದ್‌ನಿಂದ ಸುದರ್ಶನ್ ರಾವತ್, ಬಿಲ್ವಾರ್ ಕ್ಷೇತ್ರದಿಂದ ದಾಮೋದರ್ ಗುರ್ಜಾರ್ರನ್ನು ಕಣಕ್ಕಿಳಿಸಿದೆ. ಕೋಟಾ ಕ್ಷೇತ್ರದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಪ್ರಹ್ಲಾದ್ ಗುಂಜಾಲ್ ಅವರನ್ನು ಕಣಕ್ಕಿಳಿಸಿದೆ.
ತಮಿಳುನಾಡಿನ ತಿರುನಲ್ವೇಲಿ ಲೋಕಸಭಾ ಕ್ಷೇತ್ರಕ್ಕೆ ವಕೀಲ ರಾಬರ್ಟ್ ಬ್ರೂಸ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದರೊಂದಿಗೆ ಕಾಂಗ್ರೆಸ್ ಇಲ್ಲಿವರೆಗೆ 190 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತರಾಗಿದ್ದ ಗುಂಜಾಲ್ ಅವರು ಈ ಹಿಂದೆ ಎರಡು ಬಾರಿ ಕೋಟಾ ಉತ್ತರದಿಂದ ಶಾಸಕರಾಗಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
ರಾಜಸ್ಥಾನ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಂತ 1(ಏಪ್ರಿಲ್ 19) 12 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 13 ಸ್ಥಾನಗಳಿಗೆ ಎರಡನೇ ಹಂತದಲ್ಲಿ (ಏಪ್ರಿಲ್ 26) ಮತದಾನ ನಡೆಯಲಿದೆ. ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.